ತಮಿಳುನಾಡು: ಸೂಪರ್ ಸ್ಟಾರ್ ರಜನೀಕಾಂತ್ ಮುಂದಿನ ಜನವರಿಯಲ್ಲಿ ಪಕ್ಷ ಸ್ಥಾಪಿಸುವ ಸುಳಿವು ಇದೀಗಾಗಲೇ ನೀಡಿದ್ದಾರೆ. ಇದೇ ಸಮಯದಲ್ಲಿ ತಮ್ಮ ಬಹುಕಾಲದ ಗೆಳೆಯ ರಜನಿಕಾಂತ್ ಜೊತೆ ಕೈಜೋಡಿಸಲು ಸಿದ್ಧರಿರುವುದಾಗಿ ಮಕ್ಕಳ್ ನೀದಿ ಮಯ್ಯಂ ಪಕ್ಷ ಹೊಂದಿರುವ ನಟ ಕಮಲ್ ಹಾಸನ್ ಹೇಳಿಕೆ ತ.ನಾಡು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
1967ರಿಂದಲೇ ಡಿಎಂಕೆ ಮತ್ತು ಎಐಎಡಿಎಂಕೆ ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತಿರುವ ತಮಿಳು ನಾಡಿನ ರಾಜಕಾರಣದಲ್ಲಿ ಭಾರಿ ಬದಲಾವಣೆ ತರುವುದು ತಮ್ಮ ಉದ್ದೇಶ ಎಂದು ಇಬ್ಬರೂ ನಾಯಕರು ಹೇಳಿಕೊಂಡಿದ್ದಾರೆ. ಆದ್ದರಿಂದ ಮುಂಬರುವ 2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಇವರಿಬ್ಬರೂ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ .
ರಜನಿಕಾಂತ್ ಅವರು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದು ಅವರ ಆಪ್ತರು ಹೇಳಿರುವುದು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.ಇಬ್ಬರು ನಾಯಕರ ನಡುವೆ ಮೈತ್ರಿ ಏರ್ಪಡಬೇಕು ಎಂದು ಅವರ ಹಿತೈಷಿ ಗಳು ಮತ್ತು ಗೆಳೆಯರು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ದಿಸೆಯಲ್ಲಿ ದೃಢ ಕ್ರಮಗಳನ್ನು ಇಬ್ಬರೂ ಕೈಗೊಂಡಿಲ್ಲ.
ಸದ್ಯ ಕರುಣಾನಿಧಿ ಮತ್ತು ಜಯಲಲಿತಾ ಅವರಿಲ್ಲದ ಮೊದಲ ವಿಧಾನಸಭೆ ಚುನಾವಣೆ 2021 ರಲ್ಲಿ ನಡೆಯಲಿದ್ದು, ರಜನಿಕಾಂತ್ ಮತ್ತು ಕಮಲಹಾಸನ್ ಮೈತ್ರಿ ಮಾಡಿಕೊಂಡರೆ ತಮಿಳುನಾಡು ರಾಜಕೀಯದ ದಿಕ್ಕು ಬದಲಾಗಬಹುದು ಎಂದು ಹೇಳಲಾಗಿದೆ