ನವದೆಹಲಿ; ನಾಲ್ಕು ತಿಂಗಳ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ನಂತರ ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಮೊದಲು ಹೇಳಲಾಗಿತ್ತಾದರೂ ಬಳಿಕ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಪ್ರಕರಣದ ತನಿಖೆಯನ್ನು ಸಿಬಿಐ ಹೆಗಲಿಗೆ ಹೊರಿಸಲಾಗಿತ್ತು.
ಸದ್ಯ ಸಿಬಿಐ ಫೈನಲ್ ರಿಪೋರ್ಟ್ ಸಿದ್ಧಪಡಿಸುತ್ತಿದ್ದು ಸುಶಾಂತ್ ಅವರದ್ದು ಆತ್ಮಹತ್ಯೆ ಎಂಬ ಅಭಿಪ್ರಾಯಕ್ಕೆ ಸಿಬಿಐ ಬಂದಿದೆ ಎಂದು ಮೂಲಗಳು ಹೇಳುತ್ತಿವೆ. ಸುಶಾಂತ್ ಸಿಂಗ್ ಅವರ ಸಾವಿನ ಪ್ರಕರಣದ ಸಿಬಿಐ ತನಿಖೆ ಬಹುತೇಕ ಮುಗಿದಿದೆ ಎನ್ನಲಾಗಿದೆ. ವಿವಿಧ ವರದಿಗಳ ಪ್ರಕಾರ, ಸುಶಾಂತ್ ಸಿಂಗ್ ಅವರ ಕೊಲೆಯಾಗಿರುವುದಕ್ಕೆ ಸಿಬಿಐಗೆ ಯಾವುದೇ ದೃಢ ಸಾಕ್ಷ್ಯಾಧಾರಗಳು ಸಿಕ್ಕಿಲ್ಲವೆನ್ನಲಾಗಿದೆ.ಅದ್ದರಿಂದ ಸದ್ಯದಲ್ಲೇ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಿದೆ ಎನ್ನಲಾಗಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯ ವಿಧಿ ವಿಜ್ಞಾನ ತಜ್ಞರು ನಡೆಸಿದ ಪರೀಕ್ಷೆಯ ವರದಿ ಪ್ರಕಾರ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರು ಆತ್ಮಹತ್ಯೆಯಿಂದಲೇ ಸಾವನ್ನಪ್ಪಿದ್ದರೆಂದು ಹೇಳಲಾಗಿದೆ. ಈ ವರದಿ ಸಿಬಿಐ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಶಾಂತ್ ತಮ್ಮ ಬಾಂದ್ರಾದ ಅಪಾರ್ಟ್ಮೆಂಟ್ನಲ್ಲಿ ಕೊಲೆಯಾಗಿದ್ದಕ್ಕೆ ಸಿಬಿಐಗೆ ಯಾವುದೇ ಗಟ್ಟಿ ಪುರಾವೆ ಸಿಕ್ಕಿಲ್ಲ ಎಂದೂ ಮೂಲಗಳು ಹೇಳುತ್ತಿವೆ.
ಮುಂದಿನ ಕೆಲವೇ ದಿನಗಳಲ್ಲಿ ಪಟ್ನಾದಲ್ಲಿರುವ ಸಿಬಿಐ ಕೋರ್ಟ್ಗೆ ತನಿಖಾ ತಂಡ ತನಿಖೆಯ ವರದಿ ಒಪ್ಪಿಸಲಿದೆ ಎನ್ನಲಾಗಿದ್ದು, ಪ್ರಕರಣ ಸಂಬಂಧ ರಿಯಾ ಚಕ್ರವರ್ತಿ ವಿರುದ್ಧ ಯಾವುದಾದರೂ ಕ್ರಮ ನಡೆಯಲಿದೆಯಾ ಎಂಬುದನ್ನು ಕೋರ್ಟ್ ತಿಳಿಸಲಿದೆ.
ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಜವಾಬ್ದಾರಿಯನ್ನ ಮೊದಲು ಮುಂಬೈ ಪೊಲೀಸರ ಹೆಗಲಿಗೆ ಏರಿಸಲಾಗಿತ್ತು. ಆದರೆ ಇದಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಸಿಬಿಐ ಪ್ರಕರಣದ ತನಿಖೆ ಮುಂದುವರಿಸಿತ್ತು.ಸಿಬಿಐ ತನಿಖೆ ನಡೆಯುತ್ತಿರುವಾಗಲೇ ಜಾರಿ ನಿರ್ದೇಶನಾಲಯ ಕೂಡ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಕುಟುಂಬವನ್ನ ತನಿಖೆಗೊಳಪಡಿಸಿತ್ತು.