ದೆಹಲಿ ಪ್ರದೇಶದಲ್ಲಿ ಹೊಗೆ ಮಂಜು ವಾತಾವರಣ ಸೃಷ್ಟಿಯಾಗದಂತೆ ನಿಗಾವಹಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ದೆಹಲಿಯ ವಾಯು ಮಾಲಿನ್ಯ ಕುರಿತ ಅರ್ಜಿಯನ್ನು ವಿಚಾರಣೆ ನಡೆಸಿದೆ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಿದ್ದು, ಈ ಚಳಿಗಾಲದಲ್ಲಿ ಮಂಜು ಆವರಿಸುತ್ತದೆ. ಇದರಿಂದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯ ಉಂಟಾಗಬಹುದು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊಗೆ ಮಂಜು ಹೆಚ್ಚಾಗದಂತೆ ನಿಗಾವಹಿಸುವಂತೆ ಸೂಚಿಸಿದೆ.
ಇನ್ನು ದೆಹಲಿಯಲ್ಲಿ ವಾಯುಗುಣಮಟ್ಟ ನಿರ್ವಹಣೆ ಆಯೋಗ ಶುಕ್ರವಾರದಿಂದ ಕಾರ್ಯಾರಂಭಿಸಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತು. ಇದರ ಬೆನ್ನಲ್ಲೇ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಹಾಗೂ ವಿ.ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠ, ಕೇಂದ್ರಕ್ಕೆ ಈ ನಿರ್ದೇಶನ ನೀಡಿದೆ.
ಇಂದಿನಿಂದ ಆಯೋಗ ಕಾರ್ಯಾರಂಭಿಸಿದ್ದು, ಇದಕ್ಕೆ ಸದಸ್ಯರನ್ನು ಸರ್ಕಾರ ನೇಮಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ‘ಆಯೋಗದ ರಚನೆ ಬಗ್ಗೆ ನಮಗೆ ಮಾಹಿತಿ ಬೇಕಿಲ್ಲ. ಇಂಥ ಹಲವು ಆಯೋಗಗಳು, ತಜ್ಞರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಲ್ಲಿ ಹೊಗೆ ಮಂಜು ವಾತಾವರಣ ಸೃಷ್ಟಿಯಾಗದಂತೆ ಖಾತ್ರಿಪಡಿಸಿ’ ಎಂದು ತಿಳಿಸಿತು. ಇದೇ ವೇಳೆ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ದೀಪಾವಳಿ ರಜೆಯ ಬಳಿಕ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಪೀಠವು ತಿಳಿಸಿತು.
ಇನ್ನು ಅಕ್ಟೋಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಕನಿಷ್ಠ ತಾಪಮಾನ ಸರಾಸರಿ 19.1 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ನವೆಂಬರ್ ಮೊದಲ ವಾರದಲ್ಲಿ15 ರಿಂದ 16 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ. ಆದರೆ, ಈ ಬಾರಿ ಅಕ್ಟೋಬರ್ ತಿಂಗಳಿನಂತೆ ನವೆಂಬರ್ ತಿಂಗಳಲ್ಲೂ ಅಧಿಕ ಚಳಿ ಕಂಡು ಬರಲಿದ್ದು, ನವೆಂಬರ್ ತಿಂಗಳಾಂತ್ಯದಲ್ಲಿ 11-12 ಡಿಗ್ರಿ ಸೆಲ್ಸಿಯಸ್ಗೆ ಇಳಿಯಲಿದೆ ಎಂದು ಐಎಂಡಿ ವರದಿ ಮಾಡಿದೆ.
ದೆಹಲಿಯಲ್ಲಿ ಹೊಗೆ ಮಂಜು ಕವಿದ ವಾತಾವರಣ ಗಾಳಿ ಕಡಿಮೆ ಇರುವುದು ಕನಿಷ್ಠ ತಾಪಮಾನಕ್ಕೆ ಪ್ರಮುಖ ಕಾರಣವಾಗಿದೆ,ಪರ್ವತ ಪ್ರದೇಶಗಳಲ್ಲಿ ಇನ್ನೂ ಹಿಮಪಾತ ಆರಂಭವಾಗಿಲ್ಲ, ಹಿಮಪಾತ ಶುರುವಾದರೆ, ದೆಹಲಿಯಲ್ಲಿ ಹವಾಮಾನ ತಂಪಾಗಲಿದೆ ಎಂದು ಸ್ಥಳೀಯ ಐಎಂಡಿ ಕೇಂದ್ರದ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ್ ಹೇಳಿದ್ದಾರೆ.