ಚಾಮರಾಜನಗರ: ಕಳೆದ 19 ತಿಂಗಳ ಹಿಂದೆ ಪ್ರಸಾದದಲ್ಲಿ ವಿಷ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಸ್ಥಾನದ ಬಾಗಿಲು ಬಂದ್ ಮಾಡಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಭಕ್ತಾದಿಗಳಿಗೆ ಪ್ರವೇಶವೂ ಇರಲಿಲ್ಲ. ಜೊತೆಗೆ ದೇವಸ್ಥಾನದಲ್ಲಿ ಪೂಜೆಯೂ ಇರಲಿಲ್ಲ. ಆದ್ರೆ ಕಳೆದ ಕೆಲವು ದಿನಗಳಿಂದ ದೇವಸ್ಥಾನವನ್ನು ಓಪನ್ ಮಾಡಲಾಗಿದ್ದು, ಹುಂಡಿ ಎಣಿಕೆ ಕಾರ್ಯ ನಡೆದಿದೆ. ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಎಣಿಕೆ ಮಾಡಲಾಯಿತು.
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಘಟನೆ ನಡೆದ ಬಳಿಕ ಬೀಗ ಮುದ್ರೆಯಾಗಿದ್ದ ದೇವಾಲಯಕ್ಕೆ ಬರುವ ಭಕ್ತರು ದೇಗುಲದ ಹೊರಗೆ ನಿಂತು ಭಕ್ತಿ ಸಲ್ಲಿಸಿ, ಅಲ್ಲಿಯೇ ಇರಿಸಲಾಗಿದ್ದ ದೇವಾಲಯದ ಹುಂಡಿಗೆ ಕಾಣಿಕೆ ರೂಪದಲ್ಲಿ ನಗದು, ಚಿನ್ನ, ಬೆಳ್ಳಿ ಪದಾರ್ಥಗಳನ್ನು ಹಾಕಿ ಭಕ್ತಿ ಸಲ್ಲಿಸಿದ್ದರು.
ಭಕ್ತರು ಹುಂಡಿಯಲ್ಲಿ ಸಲ್ಲಿಸಿದ್ದ ಕಾಣಿಕೆಯ ಹಣವನ್ನು ಎಣಿಕೆ ಮಾಡಲಾಯಿತು. ಹುಂಡಿಯಲ್ಲಿ 2,60,577 ರೂ.ನಗದು, ಜೊತೆಗೆ 1.2 ಗ್ರಾಂ. ಚಿನ್ನ ಹಾಗೂ 32 ಗ್ರಾಂ. ಬೆಳ್ಳಿಯ ಪದಾರ್ಥಗಳು ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.
ಇದೇ ತಿಂಗಳ 20 ರಂದು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಹುಂಡಿ ಎಣಿಕೆ ಕಾರ್ಯ ನಡೆಯಿತು.