Friday, May 14, 2021
No menu items!
Home Special ಮುರ್ದಾ ಘರ್!!!

ಮುರ್ದಾ ಘರ್!!!

ಸ್ಮಶಾನ ಆತ್ಮಗಳ ವಾಸಸ್ತಾನ. ಅಲ್ಲಿ ಜಾತಿ ಭೇದಕ್ಕೆ ಜಾಗವಿಲ್ಲ. ಬಡವ ಶ್ರೀಮಂತ ಎನ್ನುವ ಭೇದವಿಲ್ಲ. ಗಂಡು ಹೆಣ್ಣೆಂಬ ಸಂಬಂಧವಿಲ್ಲ. ಅಲ್ಲಿ ಮಲಗಿರುವವರೆಲ್ಲ ಕೇವಲ ಸತ್ತ ಹೆಣ!! ಚಿರನಿದ್ರೆಗೆ ಜಾರಿದ ಮಾನವನ ಪಳೆಯುಳಿಕೆಗಳು .ಆರಡಿ ಮೂರಡಿ ಜಾಗದಲ್ಲಿ ವಿಶ್ರಾಂತಿಯತ್ತ ಹೊರಳಿರುವ ದೇಹಗಳು. ಆದರೆ ಹೆಣಗಳಿಗೂ ಜೀವವಿರುತ್ತಾ? ಸತ್ತ ಉಸಿರಿಗೂ ಉಸಿರಾಡುವ ಹಂಬಲ ಇರುತ್ತಾ? ಪ್ರೀತಿಗೆ ಸಾವಿಲ್ಲ ಅಂತಾರೆ ಹಿರಿಯರು, ಹಂಗೇನೆ ಹೆಣಕ್ಕೂ ಜೀವ ಇರುತ್ತೆ ಅಂತ ಪ್ರೂವ್ ಮಾಡಿದ್ದ ಭರತ್!!

ನಾ ಬರೆಯೋಕೆ ಹೊರಟಿದ್ದು ಯಾವುದೋ ಹಾರರ್ ಸ್ಟೋರಿ ಅಲ್ಲಾ ಕಣ್ರೀ.. ನನ್ ಗೆಳೆಯ ಭರತನ ಲವ್ ಸ್ಟೋರಿ.! ಪಂಚಭೂತಗಳಲ್ಲಿ ಲೀನ ಆಗ ಹೊರಟಿದ್ದ ಭರತನ ಮಡದಿ ಮತ್ತು ಭರತನ ಪ್ರೇಮಕತೆ!! ವಿಧಿವಶಳಾಗಿದ್ದ ಹುಡುಗಿಯನ್ನ ವಿಧಿವಿದಾನದೊಂದಿಗೆ ವರಿಸಿ , ವಿವಾಹ ಬಂಧನಕ್ಕೊಳಗಾಗಿ, ಪ್ರಣಯ ಪಕ್ಷಿಗಳಾಗಿ ವಿಹರಿಸಿದ ಭರತನ ಪ್ರೀತಿಯ ಕಥೆ. ಗೋರಿಯಿಂದೆಬ್ಬಿಸಿ ಗೃಹಬಂದನಕ್ಕೊಳಗಾದ ವಿಚಿತ್ರ ಪ್ರೇಮ್ ಕಹಾನಿ…!!

ಆತ ವೃತ್ತಿಯಲ್ಲಿ ಪತ್ರಕರ್ತ.ಅವತ್ತು ಶನಿವಾರ, ಸುದ್ದಿಮನೆಯಲ್ಲಿ ಸುದ್ದಿಗಳಿಗೆ ತಡಕಾಡಿ ಅವತ್ತಿನ ಸುದ್ದಿ ಕೊಟ್ಟು ,ರಾತ್ರಿ ಪಾಳಯದ 11:30 ನ್ಯೂಸ್ ಮುಗಿಸಿ ಸದ್ದುಸುದ್ದಿಯಿಲ್ಲದೇ ಕಛೇರಿಯಿಂದ ಮನೆಯತ್ತ ತನ್ನ ಬೈಕ್ ನಲ್ಲಿ ಹೊರಟಿದ್ದ ಭರತ. ಆಫೀಸ್ ನಿಂದ 36 ಕಿ.ಮೀ ದೂರದ ಮನೆ.ಹೆಚ್ಚಿನ ಪತ್ರಕರ್ತರಿಗೆ ಧೂಮಪಾನದ ಚಟ ಜಾಸ್ತಿ .ನಮ್ಮ ಭರತನೂ ಇದಕ್ಕೆ ಹೊರತಲ್ಲ. ಆಫೀಸ್ನಿಂದ ಸ್ವಲ್ಪ ದೂರ ಕ್ರಮಿಸದ ನಂತರ ತನ್ನ ಗಾಡಿಯನ್ನ ರೋಡ್ ಬದಿಯಲ್ಲೇ ಇದ್ದ ಸಾರ್ವಜನಿಕ ಸ್ಮಶಾನದ ಪಕ್ಕದಲ್ಲಿ ಪಾರ್ಕ್ ಮಾಡಿ ಹೊಗೆ ಬಿಡ ತೊಡಗಿದ ಭರತ. ದಿನಬೆಳಗಾದರೆ ನೂರೆಂಟು ಚಿತ್ರವಿಚಿತ್ರ ಹೆಣಗಳನ್ನು ದೃಶ್ಯಮಾದ್ಯಮದಲ್ಲಿ ಕಣ್ತುಂಬಿಕೊಳ್ಳುವ ವೃತ್ತಿಮಾದ್ಯಮದಲ್ಲಿ ಇರುವವರಿಗೆ ಮನಸ್ಸು ಪಾಶವೀ ಮನಸ್ಥಿತಿಯತ್ತ ಹೊರಳಿರುವುದು ಸಹಜ. ಹಾಗಾಗಿ ಹೆಣ ,ಕೊಲೆ, ಸ್ಮಶಾನ ಎಲ್ಲವೂ ಜನಸಾಮಾನ್ಯರಿಗೆ ಕಾಣುವ ರೀತಿಯಾಗಿ ಕಾಣಲ್ಲ ಬಿಡಿ. ಅತ್ತ ಸ್ಮಶಾನದಲ್ಲಿ ಹೆಣಗಳನ್ನು ಸುಟ್ಟ ಹೊಗೆ ಹೋಗುತ್ತಿದ್ದರೆ ಇತ್ತ ಭರತ ಸ್ಮಶಾನವನ್ನೇ ನೋಡುತ್ತಾ ಸಿಗರೇಟ್ ನ ಘಾಟು ಹೊಗೆ ಬಿಡುತ್ತಾ ನಿಂತಿದ್ದ. ಆ ಸಮಯಕ್ಕೆ ಭರತನ ತಲೆಯಲ್ಲಿ ಅದೇನು ಐಡಿಯಾ ಹೊಕ್ಕಿತೋ ಗೊತ್ತಿಲ್ಲ.ನಾಳೆಗೆ ಸಾರ್ವಜನಿಕ ಸ್ಮಶಾನದ ಸ್ಪೆಶಲ್ ಸೆಗ್ಮೆಂಟ್ ಮಾಡೋಣ ಎಂದುಕೊಂಡವನೇ ಸ್ಮಶಾನದ ಒಳ ನಡೆದ.!!

ಕೆಲವು ಅರ್ಧ ಬೆಂದಿರುವ ಹೆಣಗಳು, ತಲೆಯ ಒಳಗಿನ ಭಾಗ ಬಿಟ್ಟು ಉಳಿದೆಲ್ಲ ಭಾಗ ಸುಟ್ಟು ಹೋಗಿರುವ ಬೂದಿ, ಕೆಲವು ಹೂತಿದ್ದ ಹೆಣಗಳ ಮೇಲಿದ್ದ ಗೋರಿಗಳು ಅದರ ಮೇಲೂ ಆ ಜಾತಿ ಈ ಜಾತಿಯವನೆಂದು ಬರೆಯಿಸಿ ಪ್ರತ್ಯೇಕಿಸಿದ ಬರಹಗಳು, ಪಕ್ಕದಲ್ಲೇ ಊಳಿಡುತ್ತಿದ್ದ ಅನಾಮಿಕ ಶ್ವಾನ. ಇವೆಲ್ಲೆವನ್ನೂ ತನ್ನ ಮೊಬೈಲ್‌ ಕ್ಯಾಮರಾದಲ್ಲಿ ವಿಧವಿಧ ಭಂಗಿಯಲ್ಲಿ ಸೆರೆಹಿಡಿಯುತ್ತಾ ಮೆದುಳಿನ ಮೂಲೆಯಲ್ಲಿ ಸ್ಮಶಾನದ ಡೆಡ್ಲಿ ಸ್ಕ್ರಿಪ್ಟ್ ರೆಡಿ ಮಾಡತೊಡಗಿದ್ದ ಭರತ್.ಸ್ಮಶಾನದ ಹಲವು ಮೂಲೆಗಳಲ್ಲಿ ತಡಕಾಡಿ ವಿಡಿಯೋ ಮಾಡುತ್ತಿದವನಿಗೆ ಅಲ್ಲೊಂದು ಅಚ್ಚರಿ ಕಾದಿತ್ತು. ಅಲ್ಲಿ ಸುಮಾರು ೩ ಜೀವಗಳು ಅಂಗಾತ ಮಲಗಿದ್ದವು. ಅವೆಲ್ಲವೂ ಜೀವ ಹೋಗಿದ್ದ ಜೀವಗಳು.ಯೆಸ್ ಅದು ನಾಳಿನ ಜಾವ ಸುಡಲೆಂದು ತಂದಿರಿಸಿದ ಕೆಲವು ಅನಾಥ ಹೆಣಗಳು!! ಆ ಬ‍ಾಡಿಗಳು ಮುಕ್ತಿ ಕಾಣಲು ಮುಕ್ತಿಧಾಮದಲ್ಲೂ ನಾಳೆಯವರೆಗೂ ಕಾಯಬೇಕಿತ್ತು.ಯ‍ಾಕೆಂದರೆ ಅವೆಲ್ಲವೂ ದಿಕ್ಕುದೆಸೆಯಿಲ್ಲದ ಅನಾಥ ಹೆಣಗಳು.ಇದನ್ನೆಲ್ಲಾ ನೋಡುತ್ತಿದ್ದ ಭರತನಿಗೆ ಒಂದು ಕ್ಷಣ ಸಾವು ಎಂತಾ ಕ್ರೂರಿ ಅನ್ನಿಸಿತ್ತು . ಇದ್ದಕ್ಕಿದ್ದಂತೆ ಹಿಂಬದಿಯಿಂದ ‘ಸಾರ್’ ಎಂಬ ಒಂದು ಅಶರೀರವಾಣಿ ಕೇಳಿ ಅವಕ್ಕಾದ ಭರತ್..

ಸಾರ್….. ಒಂದು ಬಾಡಿಗೆ ಹೂಳೋಕಾದ್ರೆ 150 ,ಸುಡುಕೋ 200 ರೂಪಾಯಿ ಸಾರ್ …ಎಲ್ಲಿದೆ ಸಾರ್ ‘ನಿಮ್ ಹೆಣ’ ಎಂಬ ಅಶರೀರವಾಣಿ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಭರತ. ಹಿಂತಿರುಗಿ ನೋಡಿದರೆ ಸುಮಾರು 50 ರಿಂದ 60 ವರ್ಷ ಆಸುಪಾಸಿನ ಗಂಡಸು ಕಂಠ ಪೂರ್ತಿ ಕುಡಿದು, ಭೂಲೋಕಕ್ಕೂ ದೇವಲೋಕಕ್ಕೂ ಕಾಲಿಡುತ್ತಾ ನಶೆಯಲ್ಲಿ ತೇಲಾಡುತ್ತ ಬರುತ್ತಿದ್ದ. ಒಂದು ಕ್ಷಣ ಭಯವಾದರೂ ಆತ ಹೆಣ ಸುಡುವ ಕೂಲಿ ಎಂದು ಗೊತ್ತಾಗಲು ತುಂಬಾ ಸಮಯ ಹಿಡಿಯಲಿಲ್ಲ ಭರತನಿಗೆ. ತಕ್ಷಣ ವೃತ್ತಿ ಪ್ರವೃತ್ತನಾದ ಭರತ್, ಆತನ ಕೈಗೆ ನೂರು ರುಪಾಯಿಗಳ 2 ಗರಿ ಗರಿ ನೋಟು ಕೊಟ್ಟು ಆತನ ಬೈಟ್ ತೆಗೆದುಕೊಳ್ಳ ತೊಡಗಿದ. 200 ರೂ ಕೈಗೆ ಬಂದಿದ್ದೇ ತಡ ಆತನೂ ವಿಧವಿಧ ಭಂಗಿಯಲ್ಲಿ ಸ್ಮಶಾನದ explanation ಕೊಡಲು ಶುರು ಮಾಡಿದ. ಎಲ್ಲಾ ಮಾದರಿಯ ಹೆಣಗಳನ್ನು ವಿವರಿಸಿದ ನಂತರ ಕೊನೆಯದಾಗಿ ನಾಳೆ ಮುಕ್ತಿ ಕಾಣಿಸಲಿರುವ ಹೆಣಗಳ ವರದಿ. ಸಾರ್ ಈ ಹೆಣಗಳೆಲ್ಲಾ ನನ್ ಥರಾ ಸಾರ್… ಇವ್ಕೆ ಅಪ್ಪ ಅಮ್ಮ ಸಂಬಂದಿಕ್ರು ಯಾರು ಇಲ್ಲಾ ಸಾರ್… ನಮ್ಗೂ ದುಡ್ದಿನ ಆಸೆ..ಅದ್ಕೆ ಯಾರದ್ರೂ ಬಂದು ದುಡ್ದು ಕೊಟ್ರೆ ಗತಿ ಕಾಣಿಸ್ತೀವಿ.ಇಲ್ಲಾ ಅಂದ್ರೆ ಒಂದೆರಡು ದಿವ್ಸ ನೋಡಿ ಸುಟ್ಟು ಬಿಡ್ತೀವಿ ಸಾರ್ ಅಂತಾ explanation ಕೊಡತೊಡಗಿದ್ದ ಕೂಲಿ..

ಭರತನಿಗೆ ಏನು ಅನಿಸಿತೋ ಆ ಕ್ಷಣಕ್ಕೆ… ತಾನು ಈ ಜೀವಗಳಿಗೆ ಮುಕ್ತಿ ಕೊಡಬೇಕೆನಿಸಿತೋ ಅಥವಾ ಹೆಣ ಸುಡುವಾ ವಿಡಿಯೋ ಬೇಕೆನಿಸಿತೋ ಅಥವಾ ತಾನೂ ಅನಾಥನಾಗಿದ್ದರಿಂದ ಬೇರೆನಾದರೂ ಆಲೋಚನೆ ಬಂತೋ ಗೊತ್ತಿಲ್ಲಾ.. ನೋಡಪ್ಪಾ ನಿಂಗೆ ದುಡ್ಡು ತಾನೆ ಬೇಕು,ನಾ ಕೊಡ್ತೀನಿ ಈ ಹೆಣಗಳಿಗೆ ಮುಕ್ತಿ ಕಾಣಿಸು ಎಂದವನೇ ಸಾವಿರ ರೂ ಆತನ ಕೈಗಿತ್ತ. ಇವತ್ತು ನಾನು ಬಲ ಮಗ್ಗಿಲಿನಿಂದ ಎದ್ದಿರಬೇಕು ಎಂದುಕೊಂಡ ಕೂಲಿ ಖುಷಿಯಿಂದ ಹೆಣ ಸುಡುವ ಕಾರ್ಯಕ್ಕೆ ನಗುನಗುತ್ತಾ ಅಣಿಯಾದ. ಹೆಣಗಳ ರಾಶಿಯಿಂದ ಮತ್ತು ತಾನು ಜೋಡಿಸಿಟ್ಟಿದ್ದ ಕಟ್ಟಿಗೆಗಳನ್ನೆಲ್ಲಾ ಒಟ್ಟುಗೂಡಿಸಿ, ಎಲ್ಲಾ ಹೆಣಗಳನ್ನು ಹೊತ್ತೊಯ್ಯಲೆಂದು ಸಿದ್ದವಿರಿಸಿಕೊಂಡ ಚಟ್ಟವನ್ನ ತಂದಿರಿಸಿದ ನಂತರ ಮೂರೂ ಹೆಣ ಸುಡಲು ಅಂತಿಮ ಕ್ಷಣದ ಸಿದ್ಧತೆ ಸಿದ್ದವಾಯಿತು.ಬನ್ನೀ ಸಾರ್ ಅಂತಿಮ ಯಾತ್ರೆಗೆ ನಿಮ್ಮ ಹೆಗಲು ಕೊಡಿ ಎಂದು ಹೆಣವನ್ನು ಚಟ್ಟದ ಮೇಲಿರಿಸಿ ಭರತನನ್ನು ಕರೆದ ಕೂಲಿ. ಸರಿಯಪ್ಪ ನೀ ಹೇಳ್ದಂಗೆ ಆಗ್ಲಿ ಅಂತಾ ಚಟ್ಟದತ್ತ ದಾಪುಗಾಲಿಟ್ಟ ಭರತ್ .

ಇದೀಗ ಮೊದಲ ಹೆಣದ ಸರದಿ .ಆ ಹೆಣ ಸುಮಾರು 24 ರಿಂದ 25 ವರ್ಷದ ಹುಡುಗಿಯದಾಗಿತ್ತು.‍ಮಾಸಿ ಹೋಗಿದ್ದ ಹಳೆಯ ಚೂಡಿದಾರ್ ಧರಿಸಿತ್ತು ಆ ಹೆಣ. ಮುಡಿಯಿಂದ ಮಂಡಿಯವರೆಗಿದ್ದ ಕೇಶವೆಲ್ಲಾ ಗೆದರಿಕೊಂಡಿತ್ತು, ಕುತ್ತಿಗೆಯ ಭಾಗದಲ್ಲಿ ಕೊಂಚ ಕಂದಿತ್ತು. ಅಯ್ಯೋ ಪಾಪ ..ವಿಧಿ ಎಂತಾ ಕ್ರೂರಿ..ಇಷ್ಟು ಎಳೆ ವಯಸ್ಸಿನ್ನಲ್ಲೇ ನಿನ್ನಡೆಗೆ ಕರೆಯಿಸಿಕೊಂಡೆಯಲ್ಲಾ ಭಗವಂತಾ ಎಂದು ಮನಸ್ಸಿನ್ನಲ್ಲೇ ದೇವರನ್ನು ಶಪಿಸುತ್ತಾ, ಹೆಣವನ್ನೇ ದೃಷ್ಟಿಸಿ ನೋಡುತ್ತಿದ್ದ ಭರತನಿಗೆ… ಅಲ್ಲೊಂದು ವಿಸ್ಮಯ ,ಅಚ್ಚರಿ, ನಿಗೂಢತೆ ಎದುರಾಯಿತು!!!!!

ಆ ಹೆಣದ ಕಿರುಬೆರಳು ಕೊಂಚ ಅಲುಗಾಡಿದಂತೆ ಕಂಡು ಬಂತು.ಈ ಬದಲಾವಣೆ ವಿಚಿತ್ರ ಎನಿಸಿತು .ತಕ್ಷಣ ಹೆಣದ ಹತ್ತಿರ ಹೋಗಿ ಎದೆಬಡಿತ , ನಾಡಿಬಡಿತ ಇದೆಯೇ ಎಂದು ಪರಿಶೀಲಿಸದ ಭರತ್. ಹೆಣ ಸುಡುವ ಕೂಲಿಗೆ ಈತನ ವರ್ತನೆ ವಿಚಿತ್ರ ಎನಿಸಿತೇನೋ…ಏನ್ ಸಾರ್ ಹೆಣ ಯಾಕ್ರೀ ಮುಟ್ಟ್ತಿದ್ದೀರಾ.. ಹೆಣಕ್ಕೆ ಜೀವ ಇರಲ್ಲಾ ಸಾರ್ ಬನ್ನಿ ಸಾರ್ ಬೇಗ್ ಬೇಗ ಸುಟ್ಬುಡೋಣ,ಈಗ್ಲೇ ೧೨ಘಂಟೆ ಆಗಯ್ತೆ, ಬೆಳಿಗ್ಗೆ ಬೇರೆ ಬೇಗ ಏಳ್ಗೇಕು ಸಾರ್ ಎಂದ ಕೂಲಿ. ತನ್ನ ವೃತ್ತಿಜೀವನದಲ್ಲಿ ಈ ತರದ ಘಟನೆಗಳನ್ನು ಲೈವ್ ಆಗಿ ನೋಡದೇ ಇದ್ದರೂ, ಮಾಧ್ಯಮದಲ್ಲಿ ನೋಡಿದ್ದ ಅನುಭವಿತ್ತು ಭರತನಿಗೆ. ಹೀಗಾಗಿ ಎಲ್ಲೋ ಏನೋ ಮಿಸ್ ಹೊಡೆಯುತ್ತಾ ಇರುವುದು ಭರತನ ಗಮನಕ್ಕೆ ಬಂದಿತ್ತು. ಮತ್ತೆ ಕೂಲಿಯ ಕೈಗೆ ನೂರು ರೂ ಇಟ್ಟವನೇ ಆ ಹೆಣದ ಕೂಲಂಕುಷ ಪರೀಕ್ಷೆಗೆ ಇಳಿದ ಭರತ್. ಯೆಸ್ ಅವನ ಊಹೆ ಸುಳ್ಳಾಗಿರಲಿಲ್ಲ. ಆ ಹೆಣ ಉಸಿರಾಡುತ್ತಿತ್ತು!!!!

ತಕ್ಷಣ ತನ್ನ ವೃತ್ತಿಯ ಪ್ರಭಾವ ಮತ್ತು ಭಲದಿಂದ ಆ್ಯಂಬುಲೆನ್ಸ್, ಪೊಲೀಸರೆನ್ನೆಲ್ಲಾ ಕರೆಯಿಸಿ ಆ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಭರತ್. ಅವನ ಊಹೆ, ಸಮಯಪ್ರಜ್ಞೆ ಅವಳನ್ನ ಮತ್ತೆ ಬದುಕಿಸಿತ್ತು. ಯೆಸ್ ಆ ಹೆಣ ಜೀವಂತವಾಗಿತ್ತು. ಡಾಕ್ಟರ್ ಅವಳು ಜೀವಂತವಾಗಿರುವುದನ್ನು ದೃಡಪಡಿಸಿದ್ದರು. ತದನಂತರ ನಡೆದಿದೆಲ್ಲಾ ವಿಧಿಯಾಟ. ಆಸ್ಪತ್ರೆಯಲ್ಲಿ ತಾನೇ ಮುಂದೆ ನಿಂತು ಅವಳ ಶುಶ್ರೂಷೆ ಮಾಡತೊಡಗಿದ ಭರತ್. ಕೆಲವು ದಿನಗಳ ನಂತರ ಆಕೆ ಸಂಪೂರ್ಣ ಗುಣಮುಖಳಾಗಿದ್ದಳು. ಹೊಸ ಪ್ರಪಂಚಕ್ಕೆ ಎರಡನೇ ಬಾರಿಗೆ ಆಕೆ ಕಾಲಿಟ್ಟಿದ್ದಳು.

ಆಕೆ ದೀಪಾ(ಹೆಸರು ಬದಲಾಯಿಸಲಾಗಿದೆ) . ಅನಾಥ ಹುಡುಗಿ.ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ,ತನ್ನ ಸಂಸ್ಥೆಯ ಮ್ಯಾನೇಜರ್ ನ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಬೇಸತ್ತು ತನ್ನ ರೂಮಿನಲ್ಲಿ ಆತ್ಮಹತ್ಯೆಗೆ ಮೊರೆಹೊಗಿದ್ದಳು. ಅಕ್ಕಪಕ್ಕದ ಮನೆಯವರ ಸಹಾಯದಿಂದ ಆಸ್ಪತ್ರೆ ಸೇರಿದ್ದಳು.ಆದರೆ ಅಲ್ಲಿ ಅವಳು ಸತ್ತಿದ್ದಾಳೆಂದು ತೀರ್ಮಾನಿಸಿದ ವ್ಯೆದ್ಯರು ಸಾರ್ವಜನಿಕ ಸ್ಮಶಾನ ತಲುಪಿಸಿದ್ದರು.! ಅನಾಥ ಹೆಣ ನಾಳೆಗೆ ಮುಕ್ತಿ ಕಾಣಲೆಂದು ಅನಾಥವಾಗಿ ಸಾರ್ವಜನಿಕ ಸ್ಮಶಾನದಲ್ಲಿ ಬಿದ್ದಿತ್ತು. ಆ ಅನಾಥ ಹೆಣ ದಿಕ್ಕುದೆಸೆಯಿಲ್ಲದ ಭರತನ ಕೈ ಸೇರಿತ್ತು.

ಆಕೆ ಸಂಪೂರ್ಣ ಗುಣಮುಖಳಾದ ನಂತರ ಭರತ ಆಕೆಯ ಕೈ ಹಿಡಿದಿದ್ದ.ಯೆಸ್ ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಸತಿಪತಿಗಳಾಗಿದ್ದರು. ಗೋರಿಯಿಂದೆದ್ದು ಬಂದ ದೀಪಾ
ಗೃಹಿಣಿಯಾಗಿದ್ದಳು. ಪ್ರೀತಿಯ ಮುಖವೇ ನೋಡದಿದ್ದ ಅನಾಥರಿಬ್ಬರೂ ಪ್ರೀತಿಯ ಇಂಚಿಂಚೂ ಬಿಡದೆ ಒಬ್ಬರನ್ನೊಬ್ಬರು ಪ್ರೀತಿಸತೊಡಗಿದ್ದರು. ಅವರ ಮನೆಗೆ ಹೋದಾಗಲೆಲ್ಲ ನನಗೆ ಅವರಿಬ್ಬರ ಅನ್ಯೋನ್ಯತೆ ಕಂಡು ಪ್ರಪಂಚ ಎಷ್ಟು ಸುಂದರ ಎಂದೆನಿಸುತ್ತಿತ್ತು. ಪ್ರೀತಿಯ ಮಾಯೆ ,ಮತ್ತು ಅವರಿಬ್ಬರ ನಿಷ್ಕಲ್ಮಶ ಪ್ರೀತಿ ಈ ಕಟು ಸಮಾಜದಲ್ಲಿ ಮಾದರಿ ಎಂದೆನಿಸುತ್ತಿತ್ತು. ನಿಜ ಕಣ್ರೀ.. ಅವರಿಬ್ಬರ ಪ್ರೀತಿ ರೋಮಿಯೋ ಜ್ಯೂಲೆಯೆಟ್ ಳ ಪ್ರೀತಿಯನ್ನೂ ಮೀರಿಸುವಂತಿತ್ತು. ಪ್ರೇಮಕ್ಕೆ ಅರ್ಥ ಕಲ್ಪಿಸಿದ ಮಹಾನ್ ಪ್ರೇಮಿಗಳಾಗಿದ್ದರು ಅವರಿಬ್ಬರು.ಪ್ರೇಮಲೋಕದಲ್ಲಿ ತಮ್ಮದೇ ಅಧಿಪತ್ಯ ಸ್ಥಾಪಿಸಿದ್ದರು. ಅವರಿಬ್ಬರನ್ನು ಭೇಟಿಯಾದಾಗ ..”ಮಗಾ ಹೆಣಕ್ಕೂ ಜೀವವಿರುತ್ತೇ ಕಣೋ” ಎಂದು ಗೆಳೆಯ ಭರತ ತನ್ನ ಹೆಂಡತಿಯನ್ನು ಕಿಚಾಯಿಸುತ್ತಿದ್ದ ಧ್ವನಿ ಈಗಲೂ ನನ್ನ ಕಿವಿಯಲ್ಲಿ ಮಾರ್ಧನಿಸುತ್ತಿದೆ.ಇದಲ್ಲೆವೂ ನಡೆದು ಸುಮಾರು 4 ವರ್ಷಗಳು ಕಳೆದಿವೆ.

ಅವತ್ತು ಶನಿವಾರ ಸಾಯಂಕಾಲ ಸುಮಾರು 7 ಘಂಟೆ ಸಮಯ. ನನ್ನ ಜಂಗಮವಾಣಿ ( ಮೊಬೈಲ್) ಒಂದೇ ಸಮನೆ ರಿಂಗಣಿಸುತಿತ್ತು. ಅದು ಭರತನ ಮಡದಿ ದೀಪಾಳ ಕಾಲ್. ಕರೆ ಸ್ವೀಕರಿಸಿ ಹಲೋ.. ಎಂದವನಿಗೆ ದೀಪಾಳ ಅಳುವ ಧ್ವನಿ ಬಿಟ್ಟು ಬೇರೆನೂ ಕೇಳಿಸಲಿಲ್ಲ. ಸುಮಾರು ಐದು ನಿಮಿಷ ಆಕೆಯನ್ನು ಸಮಾಧಾನ ಪಡಿಸಿದ ನಂತರ ಆಕೆಯ ಉತ್ತರ ..ಅಣ್ಣಾ ಭರತನಿಗೆ ಆ್ಯಕ್ಸಿಡೆಂಟ್ ಆಗಿದೆ. ಉಳಿಯುವುದು ಕಷ್ಟ ಅಂತ ಏನೇನೋ ಅಂತಿದ್ದಾರೆ ಡಾಕ್ಟರ್ .ಬೇಗ ಬಾರಣ್ಣ ಎನ್ನುವ ಗದ್ಗತಿತ ವರದಿ!! ಕೂಡಲೇ ನಾನು ನನ್ನ ಗೆಳೆಯನ ನೋಡಲು ಓಡಿದೆ. ಸಾವರಿಸಿಕೊಂಡು ಆಸ್ಪತ್ರೆ ಸೇರಿದ ನನಗೆ ನೋಡಲು ಸಿಕ್ಕಿದ್ದು ನನ್ನ ಆತ್ಮೀಯ ಕುಚಿಕು, ದೀಪಾಳ ಮುದ್ದಿನ ಗಂಡ ಭರತ ಬಿಳಿಯ ಬಟ್ಟೆ ಹೊದ್ದು ಅಂಗಾತ ಮಲಗಿದ್ದ. ಆತ ಸಾವಿನ ಬಾಗಿಲ ತಾನೇ ಬಡಿದು ಒಳನಡೆದಿದ್ದ.ಭರತ ಹೆಣವಾಗಿದ್ದ,ಇನ್ನೆಂದೂ ಬಾರದ ಲೋಕಕ್ಕೆ ತನ್ನ ಪ್ರಯಾಣ ಬೆಳೆಸಿದ್ದ. ಆಕೆಯನ್ನ ಮತ್ತೆ ಅನಾಥಳನ್ನಾಗಿಸಿ ಕಾಣದ ಲೋಕಕ್ಕೆ ಹೊರಟು ನಿಂತಿದ್ದ..

ಆಕೆಯನ್ನು ಸಮಧಾನ ಮಾಡಲು ನಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಆಕೆಗೆ ವಾಸ್ತವ ಅರಿವಾಗುತ್ತಲೇ ಇರಲಿಲ್ಲ .ಹೇಗೆ ತಾನೇ ಆದೀತು. ತನಗೆ ಮರುಜೀವ ಕೊಟ್ಟು ಬಂಗಾರದ ಬಾಳಿಗೆ ತಿಲಕವಿಟ್ಟ ಆಕೆಯ ಬಾಳಿನ ನಂದಾದೀಪ ತನ್ನ ಕಣ್ಣೆದುರಲ್ಲೇ ಕೊನೆಯುಸಿರೆಳೆದರೆ? ಕೊನೆಗೂ ಆಕೆಯನ್ನ ಸಾಧ್ಯವಾದಷ್ಟು ಸಮಾಧಾನಿಸಿ ನನ್ನ ಗೆಳೆಯನ ಅಂತಿಮ ಯಾತ್ರೆಗೆ ಸಿದ್ದತೆ ಮಾಡಿಸಿದೆ. ಸ್ಮಶಾನ ತಲುಪಿದ ನಂತರ ಆತನನ್ನು ಸುಡುವ ಪ್ರಕ್ರಿಯೆ . ಆದರೆ ಆಕೆ ಅವನ ಕಿರುಬೆರಳನ್ನೇ ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಕ್ಷಣ ಕ್ಷಣಕ್ಕೂ ಆತನಿಗೆ ಮತ್ತೆ ಜೀವ ಬರುತ್ತೆ ಸುಡಬೇಡಿ ಎಂದು ಗೋಳಾಡುತ್ತಿದ್ದಳು. ಕಿವಿಯ ಹತ್ತಿರ ಹೋಗಿ ಎದ್ದೇಳು ಎಂದು ಬೊಬ್ಬಿಡುತ್ತಿದ್ದಳು. ಆತನ ಹಣೆಗೆ ಮುತ್ತಿಕ್ಕುತ್ತಾ, ಆತನ ಪಾದಕ್ಕೆ ನಮಸ್ಕರಿಸುತ್ತಿದ್ದಳು.ಪ್ರತಿ ಕ್ಷಣಕ್ಕೂ ಆತನ ನಾಡಿಯನ್ನ ಪರಿಶೀಲಿಸಿ ಇದೀಗ ಎಚ್ಚರಗೊಳ್ಳುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದಳು. ನನ್ನ ಗಂಡ, ನನ್ನ ಸರ್ವಸ್ವವನ್ನು ಕಿತ್ತುಕೊಳ್ಳಬೇಡ ದೇವರೆ ಎಂದು ದೇವರಲ್ಲಿ ಅಂಗಲಾಚುತ್ತಿದ್ದಳು. ಪ್ರತಿ ಕ್ಷಣವೂ ಕಿರುಬೆರೆಳಾದರೂ ಆಡಿಸುತ್ತಾನೆ ಎಂದು ಆಸೆಯಿಂದ ಕಣ್ಣಾಯಿಸುತ್ತಿದ್ದಳು.ಆದರೆ ಆತ ಇವಳ ಮೊರೆಗೆ ಓಗೊಡಲೇ ಇಲ್ಲ. ಎಷ್ಟು ಅತ್ತು ಕರೆದರೂ ಚಿರನಿದ್ರೆಯಿಂದ ಎದ್ದೇಳಲೇ ಇಲ್ಲಾ.ಹೆಣಕ್ಕೆ ಜೀವ ತುಂಬಿದ್ದ ಭರತ್ ಹೆಣವಾಗಿದ್ದ.ಸತ್ತ ಹೆಣಕ್ಕೂ ಜೀವವಿರುತ್ತೆ ಮಗಾ ಎನ್ನುತ್ತಿದ್ದ ಆತನ ಮಾತು ನನ್ನ ಮನಸ್ಸಿನಲ್ಲಿ ಗುಂಯ್ ಗುಡುಗುತ್ತಿತ್ತು….

ಇಂತೀ ನಿಮ್ಮವನೇ
ಭವನ್ Mundodi

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments