ನವದೆಹಲಿ: ಅಹ್ಮದ್ ಪಟೇಲ್ ನಿಧನದಿಂದ ತೆರವಾಗಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಖಜಾಂಚಿ ಸ್ಥಾನಕ್ಕೆ ಮಧ್ಯಂತರ ಕ್ರಮವಾಗಿ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಮಾಜಿ ಸಚಿವ ಪವನ್ ಕುಮಾರ್ ಬನ್ಸಾಲ್ ಅವರನ್ನು ಶನಿವಾರ ನೇಮಕ ಮಾಡಿದ್ದಾರೆ.
ಅಹ್ಮದ್ ಪಟೇಲ್ ಅಕಾಲಿಕ ಮರಣದ ನಂತರ ಪವನ್ ಕುಮಾರ್ ಬನ್ಸಾಲ್ ಅವರು ಎಐಸಿಸಿ ಆಡಳಿತದ ಹೊಣೆ ಹೊತ್ತಿದ್ದಾರೆ. ಬನ್ಸಾಲ್ ಅವರು ಮಧ್ಯಂತರ ಕ್ರಮವಾಗಿ ತಕ್ಷಣದಿಂದ ಜಾರಿಯಾಗುವಂತೆ ಹೆಚ್ಚುವರಿಯಾಗಿ ಈ ಹುದ್ದೆಯನ್ನು ವಹಿಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1949ರ ಆ. 21ರಂದು ಗುಜರಾತ್ನಲ್ಲಿ ಜನಿಸಿದ್ದ ಅಹ್ಮದ್ ಪಟೇಲ್ ಲೋಕಸಭೆಗೆ 3 ಬಾರಿ ಆಯ್ಕೆಯಾಗಿದ್ದರು. ಹಾಲಿ ರಾಜ್ಯಸಭಾ ಸದಸ್ಯರಾಗಿದ್ದ ಅಹಮದ್ ಪಟೇಲ್ ಒಟ್ಟು 8 ಬಾರಿ ಸಂಸದರಾಗಿದ್ದರು. ಎಐಸಿಸಿಯ ಖಜಾಂಚಿಯೂ ಆಗಿದ್ದ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರಲ್ಲೇ ಅತ್ಯಂತ ಹೆಚ್ಚು ಪ್ರಭಾವಿ ಎನಿಸಿದ್ದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಹಳ ವರ್ಷ ರಾಜಕೀಯ ಕಾರ್ಯದರ್ಶಿಯೂ ಆಗಿದ್ದರು. ಇದಲ್ಲದೆ ಇತರೆ ಪಕ್ಷಗಳ ಪ್ರಮುಖ ನಾಯಕರೊಂದಿಗೂ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು.
ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದರು. ತಮ್ಮ ಇಡೀ ಜೀವನವನ್ನು ಪಕ್ಷಕ್ಕೆ ಮುಡಿಪಾಗಿಟ್ಟ ನಿಷ್ಠಾವಂತ ನಾಯಕ.ಪಕ್ಷ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದಾಗಲೆಲ್ಲ ಬಲವಾಗಿ ನಿಲ್ಲುತ್ತಿದ್ದವರು ಅಹ್ಮದ್ ಪಟೇಲ್. ಪಕ್ಷಕ್ಕೆ ಆಧಾರ ಸ್ತಂಭದಂತಿದ್ದ ಅಹ್ಮದ್ ಪಟೇಲ್ ನ.25ರಂದು ನಿಧನರಾಗಿದ್ದರು. ಇದೀಗ ಅವರ ಸ್ಥಾನವನ್ನು ಬನ್ಸಾಲ್ ಹೇಗೆ ಮುನ್ನಡೆಸಲಿದ್ದಾರೆ ಎಂದು ಕಾದು ನೋಡಬೇಕಿದೆ.