ಬೆಂಗಳೂರು: ಮದುವೆಗಾಗಿ ಮತಾಂತರ ಸಹಿಸಲಾರೆವು. ನಮ್ಮಲ್ಲಿ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳನ್ನು ಪ್ರೀತಿಯ ನಾಟಕವಾಡಿ, ಮತಾಂತರ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಕಠಿಣ ಪ್ರಕರಣ ತೆಗೆದುಕೊಳ್ಳಬೇಕಾಗಿದೆ ಎಂದಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದರು. ಈ ಬಗ್ಗೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಪ್ರಶ್ನೆಗಳನ್ನ ಕೇಳಿದ್ದಾರೆ.
ಲವ್ ಜಿಹಾದ್ ಎಂದರೆ ಏನು ಎನ್ನುವುದೇ ಸ್ಪಷ್ಟ ಇಲ್ಲದೆ ಇರುವಾಗ, ಯಾವ ಕಾನೂನು ಕೂಡಾ ಲವ್ ಜಿಹಾದ್ ಅನ್ನು ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಗೃಹಸಚಿವಾಲಯವೇ ಸ್ಪಷ್ಟಪಡಿಸಿರುವಾಗ ಕರ್ನಾಟಕದ ಮುಖ್ಯಮಂತ್ರಿಗಳು ಯಾವ ಆಧಾರದಲ್ಲಿ ಕಾನೂನು ರೂಪಿಸಲು ಹೊರಟಿದ್ದಾರೆ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತಮ್ಮ ರಾಜಕೀಯ ಅನುಕೂಲತೆಗೆ ತಕ್ಕಂತೆ ತಪ್ಪಾಗಿ ವಿಶ್ಲೇಷಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಮತಾಂತರ ಎನ್ನುವುದು ಅಂತರಧರ್ಮೀಯ ಮದುವೆಗೆ ಅಸ್ತ್ರವಾಗಬಾರದು ಎಂದು ತೀರ್ಪು ಹೇಳಿದೆಯೇ ಹೊರತು ಅಂತರಧರ್ಮೀಯ ಮದುವೆಯೇ ಅಕ್ರಮ ಎಂದು ಹೇಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ಲವ್ ಜಿಹಾದ್’ ತಡೆಗೆ ಕಾನೂನು ರೂಪಿಸುವ ಬಿಎಸ್ ವೈ ಅವರ ಘೋಷಣೆ, ಆಡಳಿತದ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನವಲ್ಲದೇ ಇನ್ನೇನಲ್ಲ. ಕೋಮುದ್ವೇಷವನ್ನು ಹುಟ್ಟುಹಾಕಿ ರಾಜಕೀಯದ ಬೇಳೆ ಬೇಯಿಸುವ ದುರುದ್ದೇಶವಲ್ಲದೇ ಬೇರೆ ಯಾವ ಸದುದ್ದೇಶ ಈ ಘೋಷಣೆಗೆ ಇಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.