ಬೆಂಗಳೂರು: ಚಂದನವನದ ಡ್ರಗ್ಸ್ ಕರ್ಮಕಾಂಡದಲ್ಲಿ ಬಂಧಿಯಾಗಿ ಕಂಬಿ ಎಣಿಸುತ್ತಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮತ್ತು ನಟಿ ಸಂಜನಾ ಗಿಲ್ರಾನಿ ಜಾಮೀನಿಗಾಗಿ ವಿಧವಿಧ ಹೋರಾಟ ನಡೆಸುತ್ತಿದ್ದಾರೆ. ಇದೀಗ ನಟಿ ರಾಗಿಣಿ ದ್ವಿವೇದಿ ದೇಶದ ಅತ್ಯುನತ್ತ ನ್ಯಾಯಾಲಯದ ಮೊರೆ ಹೋಗಿದ್ದು ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಬಂಧಿಯಾಗಿ ಮೂರು ತಿಂಗಳುಗಳಿಂದ ಜೈಲುವಾಸ ಅನುಭವಿಸುತ್ತಿರುವ ರಾಗಿಣಿ ದ್ವಿವೇದಿ ಸದ್ಯ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ.ಸದ್ಯ ಜಾಮೀನಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ರಾಗಿಣಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಇನ್ನೊಂದೆಡೆ ನಟಿ ಸಂಜನಾ ಹೈಕೋರ್ಟ್ನಲ್ಲಿ ಜಾಮೀನಿಗಾಗಿ ಮರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ರಾಗಿಣಿಗೆ ನವೆಂಬರ್ 3ರಂದು ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಸದ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಗಿಣಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಹೈಕೋರ್ಟ್ ನಲ್ಲಿ ಜಾಮೀನು ಸಿಗದ ಕಾರಣ ನಟಿ ರಾಗಿಣಿ ದ್ವಿವೇದಿ ಪರ ವಕೀಲರು ಈಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಡಿ.4ರಂದು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.