ತಿರುವನಂತಪುರಂ: ಕೇರಳದ ಪ್ರಸಿದ್ಧ ತೀರ್ಥ ಕ್ಷೇತ್ರ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸುವ ಭಕ್ತರಿಗೆ ಕೇರಳ ಸರ್ಕಾರ ಪರಿಷ್ಕೃತ ಕೊರೋನಾ ಮಾರ್ಗಸೂಚಿ ಹೊರಡಿಸಿದ್ದು, ಭಕ್ತಾಧಿಗಳು ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಕಡ್ಡಾಯ ಧಾರಣೆ, ತೀರ್ಥಯಾತ್ರೆಯುದ್ದಕ್ಕೂ ಸ್ಯಾನಿಟೈಸರ್ ಬಳಕೆ ಸೇರಿದಂತೆ ಇನ್ನೂ ಹಲವು ಮಾರ್ಗಸೂಚಿಗಳನ್ನು ಕೇರಳ ಸರ್ಕಾರ ಜಾರಿಗೆ ತಂದಿದೆ.
ಈ ಹಿಂದೆ ಕೊರೋನಾ ತುತ್ತಾಗಿ ಚೇತರಿಸಿಕೊಂಡಿರುವ ಭಕ್ತರು ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಮತ್ತು ವಾಸನೆ ಕಳೆದುಕೊಳ್ಳುವಂತಹ ಲಕ್ಷಣಗಳು ಇರುವವರು ತೀರ್ಥಯಾತ್ರೆ ಕೈಗೊಳ್ಳಬಾರದು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.
ಶಬರಿ ಭಕ್ತರು ದೇಗುಲ ಆಗಮನಕ್ಕೆ 24 ಗಂಟೆಗಳ ಮೊದಲು ಪಡೆದ ಕೊರೋನಾ ನೆಗೆಟಿವ್ ಪ್ರಮಾಣಪತ್ರಗಳನ್ನು ಹಾಜರುಪಡಿಸಬೇಕು. ಇದು ಆರ್ಎಟಿ-ಪಿಸಿಆರ್, ಆರ್ಟಿ-ಲ್ಯಾಂಪ್ ಅಥವಾ ಎಕ್ಸ್ಪ್ರೆಸ್ ನ್ಯಾಟ್ ಪರೀಕ್ಷಾ ಫಲಿತಾಂಶವಾಗಿರಬಹುದು ಎಂದು ಸೂಚಿಸಿದೆ.ಅಲ್ಲದೇ ಈ ಬಾರಿ ಪಂಪಾ ಮತ್ತು ನೀಲಕ್ಕಲ್ನಲ್ಲಿ ಜನಸಂದಣಿಗೆ ಅವಕಾಶವಿಲ್ಲ ಎಂದೂ ತಿಳಿಸಿದೆ.