ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಲ್ಲಾ ಚುನಾವಣಾ ಸಿಬ್ಬಂದಿಗಳು ಇಂದು ವರದಿ ಮಾಡಿಕೊಂಡಿದ್ದಾರೆ. 678 ಮತಗಟ್ಟೆಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಈ ಸಂಬಂಧ 678 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವ ಸಿಬ್ಬಂದಿಗಳು ಮಸ್ಟರಿಂಗ್ ಸೆಂಟರ್ ನಿಂದ ಮತ ಯಂತ್ರಗಳನ್ನು ಸಂಗ್ರಹ ಮಾಡಿಕೊಂಡು ಮತಗಟ್ಟೆಗಳಿಗೆ ತೆರಳುತ್ತಿದ್ದಾರೆ. ಹೆಚ್ಚುವರಿಯಾಗಿ ಶೇ.20 ರಷ್ಟು ಚುನಾವಣಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.
ಉಪಚುನಾವಣೆಗೆ ಖಾಕಿ ಪಡೆ ಕೂಡ ಸಿದ್ಧವಾಗಿದ್ದು, ಶಾಂತಿಯುತ ಚುನಾವಣೆಗೆ ಅಗತ್ಯವಾಗಿರುವ ಭದ್ರತೆಯನ್ನು ರೂಪಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಮಲ್ ಪಂತ್, ಆರ್ ಆರ್ ನಗರವನ್ನೂ ಸೂಕ್ಷ್ಮ ಮತ ಕ್ಷೇತ್ರವಾಗಿ ಪರಿಗಣಿಸಲಾಗಿದೆ. ಈ ಕ್ಷೇತ್ರದಲ್ಲಿ ಗಲಾಟೆಗಳಾಗುವ ಮನ್ಸೂಚನೆ ಕಂಡು ಬಂದಿದೆ. ಹೀಗಾಗಿ ಇಲ್ಲಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿರುವುದಾಗಿ ಪೊಲೀಸ್ ಆಯುಕ್ತರು ಹೇಳಿದರು.
ಹಾಲಿ ಕ್ಷೇತ್ರದಲ್ಲಿನ ಭದ್ರತೆ ನಿರ್ವಹಣೆಗಾಗಿ ಮೂರು ಮಂದಿ ಡಿಸಿಪಿ, ಐದು ಮಂದಿ ಎಸಿಪಿ, 30 ಇನ್ಸ್ ಪೆಕ್ಟರ್, 94 ಮಂದಿ ಎಸ್ ಐ, 1547 ಹೆಡ್ ಕಾನ್ಸ್ ಟೇಬಲ್ ಮತ್ತು ಕಾನ್ಸ್ ಟೇಬಲ್ಸ್, 699 ಹೋಂ ಗಾರ್ಡ್ಸ್, 20 ಸಿಎಆರ್ ತುಕಡಿ ,ಸೇರಿ ಒಟ್ಟು 2563 ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. 27 ಚೆಕ್ ಪೋಸ್ಟ್ ತೆರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೂ ಪಡೆಯಲಾಗಿದೆ ಎಂದು ಕಮಲ್ ಪಂತ್ ತಿಳಿಸಿದರು.
ನಾಳೆ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜೊತೆಗೆ 4ನೇ ತಾರೀಖಿನವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೊರಗಡೆಯಿಂದ ಬಂದವರು ಕ್ಷೇತ್ರದಲ್ಲಿ ಇರಬಾರದು. ಯಾರಾದರೂ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲೆಡೆ ಸಂ್ಪೂರ್ಣ ಬಂದೋಬಸ್ತ್ ಮಾಡಲಾಗಿದೆ. ಮತದಾರರು ನಿರ್ಭೀತಿಯಿಂದ ಬಂದು ಮತ ಚಲಾಯಿಸಿ ಎಂದು ಪೊಲೀಸ್ ಕಮೀಷನರ್ ಕಮಲ್ ಪಂತ್ ಹೇಳಿದ್ದಾರೆ.