ಶಾಸಕ ಯತ್ನಾಳ್ ವಿರುದ್ಧ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಯತ್ನಾಳ್ ಹುಚ್ಚರಂತೆ ಮಾತನಾಡುತ್ತಿದ್ದಾರೆ. ಸಚಿವ ಸ್ಥಾನ ಸಿಗದೆ ಹತಾಶರಾಗಿ ಈ ರೀತಿ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ. ಯತ್ನಾಳ್ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕೇವಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಲ್ಲ. ಎಲ್ಲಾ ಸಮಾಜಕ್ಕೂ ಸೇರಿದ ಪ್ರಶ್ನಾತೀತ ನಾಯಕರಾಗಿದ್ದಾರೆ. ಆದರೆ ಕೆಲ ವೀರಶೈವ ಮುಖಂಡರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಇವರಿಗೆ ಅಧಿಕಾರ ನೀಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ಶಾಸಕ ಬಸನಗೌಡ ಯತ್ನಾಳ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ ಅವರು ಹುಚ್ಚರಂತ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಯತ್ನಾಳ್ ಬಿಎಸ್ ಯಡಿಯೂರಪ್ಪ ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ, ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಯಡಿಯೂರಪ್ಪನವರ ನಂತರ ಉತ್ತರ ಕರ್ನಾಟಕವವರೇ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರಧಾನಿ ಮನಸ್ಸಿನಲ್ಲಿ ಈ ವಿಚಾರ ಬಂದಿದೆ. ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕವದವರಿಗೆ ಸಿಎಂ ಮಾಡೋಣ ಎಂದಿದ್ದಾರೆ. ಅದೂ ಕೂಡ ಬಹುತೇಕ ಫೈನಲ್ ಆಗಿದೆ ಎಂದು ಬಸವನ ಗೌಡ ಯತ್ನಾಳ್ ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಆಯನೂರು ಮಂಜುನಾಥ್, ಯತ್ನಾಳ್ ಗೆ ಯಾವಾಗ ರಾಜಕೀಯವಾಗಿ ಅಭದ್ರತೆ ಕಾಡುತ್ತೋ ಆಗ ಇಂತಹ ಹೇಳಿಕೆಯನ್ನು ನೀಡುತ್ತಾರೆ. ತಾವು ಕಳೆದು ಹೋಗುತ್ತಿದ್ದೇನೆ ಅನಿಸುತ್ತೋ ಆಗ ಇಂತಹ ಅಸಂಬದ್ಧ ಮತ್ತು ಅಸಂದರ್ಭಿಕ ಮಾತುಗಳನ್ನು ಆಡುತ್ತಾರೆ. ಕಾಯಿಲೆಗಳಲ್ಲಿ ಆತ್ಮರತಿ ಎಂಬ ಕಾಯಿಲೆ ಇದೆ. ಇದು ಯತ್ನಾಳ್ ಗೆ ಬಂದಿದೆ. ತನ್ನನ್ನು ತಾನು ವೈಭವಿಕರಿಸಿಕೊಂಡು ಹೇಳಿಕೆ ನೀಡುವ ಖಾಯಿಲೆ ಯತ್ನಾಳ್ ಗೆ ಇದೆ ಅಂತ ಹೇಳಿದ್ದಾರೆ.