ತಿರುಮಲ: ಕೊರೊನಾ ನಡುವೆಯೂ ಜನ ತಮ್ಮಿಷ್ಟ ದೇವರನ್ನು ನೋಡಲು ಮುಂದೆ ಹೋಗುತ್ತಿದ್ದಾರೆ. ನಿನ್ನೆ ವೈಕುಂಠ ಏಕಾದಶಿಯಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲೇ ಭಕ್ತರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹೀಗೆ ದರ್ಶನ ಪಡೆದವರಲ್ಲಿ ಕಾಣಿಕೆಯನ್ನು ಅರ್ಪಿಸಿದ್ದಾರೆ.
ನಿನ್ನೆ ಒಂದೇ ದಿನ 42,825 ಭಕ್ತರು ತಿರುಮಲ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ಪಡೆದಿದ್ದಾರೆ. ಇವರೆಲ್ಲರೂ ಹಾಕಿರುವ ಕಾಣಿಕೆಯ ಹಣವು ಒಂದೇ ದಿನದ ಹಿಂದಿನ ದಾಖಲೆಗಳನ್ನು ಮುರಿದಿದೆ.
ಒಂದೇ ದಿನ 4.39 ಕೋಟಿ ರೂ. ಸಂಗ್ರಹವಾಗಿದೆ. ಈ ಕುರಿತು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಮಾಹಿತಿ ನೀಡಿದೆ. ಈ ಪರಿಯ ಹಣ ಸಂಗ್ರಹವಾಗಿರುವುದು ದಾಖಲೆಯ ಪ್ರಮಾಣ. ಕೊರೊನಾ ನಡುವೆಯೂ, ಯಾವುದೇ ವೈರಸ್ ಲೆಕ್ಕಸಿದೇ ಭಕ್ತರು ತಮ್ಮ ದೇವನನ್ನು ನೋಡಲು ತಂಡೋಪತಂಡವಾಗಿ ಬಂದಿದ್ದರು. ಎಲ್ಲ ರೀತಿಯ ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ದೇವಾಲಯ ಬಂದ್ ಮಾಡಿದ್ದರು. ಹೀಗಾಗಿ ದೇವರ ದರ್ಶನ ಯಾರಿಗೂ ಸಿಕ್ಕಿರಲಿಲ್ಲ. ಜೂನ್ 8 ರಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ರೀವಾರಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅದಾದ ನಂತರವೂ ಭಕ್ತರು ಕರೊನಾ ವೈರಸ್ ಇದ್ದರೂ ಲೆಕ್ಕಿಸದೇ ದೇಗುಲಕ್ಕೆ ಧಾವಿಸಿ ತಮ್ಮ ಕೈಲಾದಷ್ಟು ಕಾಣಿಕೆ ನೀಡಿ ಹೋಗುತ್ತಿದ್ದರು. ಈ ಕಾಣಿಕೆ ಕೋಟಿಯನ್ನು ಮೀರುತ್ತಲೇ ಸಾಗಿತ್ತು. ನಂತರ ಸೆಪ್ಟೆಂಬರ್ 6 ರಂದು ಒಂದೇ ದಿನ ಹುಂಡಿಯಲ್ಲಿನ ಸಂಗ್ರಹವಾದ 1 ಕೋಟಿ ರೂ. ದಾಟಿ ದಾಖಲೆಯಾಗಿತ್ತು.