ಉತ್ತರ ಕರ್ನಾಟಕದಲ್ಲಿ ಭೀಮಾ ನದಿಯ ಪ್ರವಾಹದಿಂದಾಗ ಜನ ತತ್ತರಿಸಿ ಹೋಗಿದ್ದಾರೆ. ನೂರಾರು ಹಳ್ಳಿಗಳಿಗೆ ನೀರು ನುಗ್ಗಿ ಜನ ಆಸ್ತಿಮನೆ ಮಠ ಕಳೆದುಕೊಂಡು ಕಂಗಲಾಗಿದ್ದಾರೆ. ಕಳೆದ 30 ವರ್ಷಗಳಲ್ಲಿ ಕಂಡಿರದ ಪ್ರವಾಹ ಇದಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿರಿ ಬಗ್ಗೆ ಪ್ರಧಾನಿ ಮೋದಿ ಅವರು ಕನ್ನಡದಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರವೆಂಬಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರು ಕನ್ನಡದಲ್ಲೇ ಮರು ಟ್ವೀಟ್ ಮಾಡಿದ್ದು, ಪ್ರವಾಹ ಪರಿಸ್ಥಿತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮವಾಗಿ ಸ್ಪಂದಿಸಬೇಕು ಎಂದಿದ್ದಾರೆ.
ಸಾವಿರಾರು ಎಕರೆ ರೈತರ ಜಮೀನು ಸಂಪೂರ್ಣ ಜಲಾವೃತವಾಗಿದೆ. ಅನ್ನದಾತರಿಗೆ ನಷ್ಟವುಂಟಾಗಿದೆ. ಆದ್ರೆ ರಾಜ್ಯದ ಹಾಗೂ ಕೇಂದ್ರದ ಮಂತ್ರಿಗಳು ಈವರೆಗೂ ಇತ್ತ ತಲೆ ಹಾಕಿಲ್ಲ. ಬಂದವರೂ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಕೂಡಲೇ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ಪ್ರವಾಹ ಪೀಡಿತರ ರಕ್ಷಣೆಗಾಗಿ ಕೂಡಲೇ ಎನ್ಡಿಆರ್ಎಫ್ ತಂಡಗಳನ್ನು ನೆರೆಪೀಡಿತ ಪ್ರದೇಶಗಳಿಗೆ ನಿಯೋಜಿಸಬೇಕು. ಬೆಳೆ ಪರಿಹಾರ ಸೇರಿದಂತೆ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ರಣದೀಪ್ ಸುರ್ಜೆವಾಲಾ ಟ್ವೀಟ್ಮೂಲಕ ಆಗ್ರಹಿಸಿದ್ದಾರೆ.