ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ವಿರುದ್ಧ ಸಮರವನ್ನೇ ಸಾರಿರುವ ದೇಶದ ಅನ್ನದಾತರ ಮುಷ್ಕರ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಹಲವು ಸುತ್ತಿನ ಮಾತುಕತೆಯ ನಂತರವೂ ಪಟ್ಟು ಬಿಡದ ಕಿಸಾನ್ ಯೂನಿಯನ್ ಮುಖಂಡರ ಜೊತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಧಿಡೀರ್ ಸಭೆ ನಡೆಸಿದ್ದಾರೆ.
ಇದುವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ಹಲವು ಸಲ ರೈತ ಮುಖಂಡರ ಜೊತೆ ಹಲವು ಬಾರಿ ಸಭೆ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇದರ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಸಭೆ ನಡೆಸಿದ್ದು ಇದು ಫಲಪ್ರದವಾಗಲಿದೆಯೇ ಎಂದು ಕಾದು ನೋಡಬೇಕಿದೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ-2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020, ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020ಗಳನ್ನು ವಿರೋಧಿಸಿ ರೈತರು ನಡೆಸುತ್ತಿದ್ದಾರೆ. ಸದ್ಯ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆ 17 ನೇ ದಿನಕ್ಕೆ ಕಾಲಿಟ್ಟಿದೆ.
ಏಕಾಏಕಿ ಸಭೆ ಕರೆದು ಕೇಂದ್ರ ಸಚಿವರು ಮಾತುಕತೆ ನಡೆಸಿದ ಹಿನ್ನೆಲೆ ಕುತೂಹಲ ಸೃಷ್ಟಿಯಾಗಿದೆ.ಅಲ್ಲದೇ ನಾಳೆ ಜೈಪುರ-ದೆಹಲಿ ಹೆದ್ದಾರಿ ತಡೆ ನಡೆಸಲು ರೈತರು ಮುಂದಾಗಿದ್ದು, ರಾಜಸ್ಥಾನದ ಶಹಜಹಾನಪುರದಿಂದ ಭಾನುವಾರ 11 ಕ್ಕೆ ಸಾವಿರಾರು ರೈತರು ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಲು ಸಿದ್ಧರಾಗಿದ್ದಾರೆ.