ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆಯಿಂದ ಮಂಜು ಮುಸುಕಿದ ವಾತಾವರಣವೇ ಇತ್ತು. ಸಂಜೆಯಾಗುತ್ತಿದ್ದಂತೆ ಮಳೆಹನಿ ಶುರುವಾಗಿದ್ದು, ಸುಮಾರು ಎರಡೂವರೆ ಗಂಟೆಯಾದರೂ ನಿಂತಿಲ್ಲ. ನಗರದ ಹಲವೆಡೆ ಜೋರು ಮಳೆ ಸುರಿದಿದೆ. ಅದರಲ್ಲಿ ಮೆಜೆಸ್ಟಿಕ್, ವಿಲ್ಸನ್ ಗಾರ್ಡನ್, ಶಾಂತಿನಗರ, ಜಯನಗರ, ಮೆಜೆಸ್ಟಿಕ್, ಮಾರುಕಟ್ಟೆ, ಕೋರಮಂಗಲ, ಉತ್ತರ ಬೆಂಗಳೂರಿನ ಹಲವೆಡೆ ಮಳೆ ಜೋರಾಗಿದೆ.
ಕಳೆದ ಎರಡು ದಿನಗಳಿಂದ ಬಿಡುವು ಕೊಟ್ಟ ಮಳೆರಾಯ ಇಂದು ಅಬ್ಬರಿಸಿದ್ದು, ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ. ರಸ್ತೆಗಳಲ್ಲಿ ನೀರು ತುಂಬಿದ್ದು, ಹಳ್ಳ ಕೊಳ್ಳದ ಬಗ್ಗೆ ಬೈಕ್ ಸವಾರರು ಗಾಬರಿಂದಾನೇ ಓಡಿಸುವಂತಾಗಿದೆ. ಈಗಾಗಲೇ ಹವಮಾನ ಇಲಾಖೆ ಕೂಡ ಈ ಬಗ್ಗೆ ಮುನ್ಸೂಚನೆ ನೀಡಿದೆ.
ಅದರಂತೆ ನಗರದಲ್ಲಿ ಇನ್ನೆರಡು ದಿನ ಇದೇ ರೀತಿ ಮಳೆಯಾಗಲಿದೆ. ಇಂದು ಮತ್ತು ನಾಳೆಯೂ ಮಳೆ ಇರಲಿದ್ದು, ಮನೆಯಿಂದ ಹೊರಡುವಾಗ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಮಳೆಯಾಗಿದೆ. ಚಿಕ್ಕಬಳ್ಳಾಪುರ, ಮಂಡ್ಯ ಮೊದಲಾದ ದಕ್ಷಿಣ ಭಾಗದಲ್ಲೂ ಭರ್ಜರಿ ಮಳೆಯಾಗಿದೆ. ಹಾವೇರಿ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಸಿಡಿಲು ಬಡಿದು ಐವರು ರೈತರು ಸಾವನ್ನಪ್ಪಿದ್ದಾರೆ. ವಿಜಯಪುರ ಮತ್ತು ರಾಯಚೂರಿನಲ್ಲಿ ಒಂಬತ್ತು ಕುರಿ ಮೇಕೆಗಳು ಸಿಡಿಲಿಗೆ ಬಲಿಯಾಗಿವೆ. ರಾಯಚೂರಿನಲ್ಲಿ ಸಿಡಿಲಿಗೆ ನಾಲ್ಕು ಎಕರೆ ಕಬ್ಬಿನ ತೋಟ ಸುಟ್ಟು ಕರಕಲಾಗಿದೆ. ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಭೈರಾಪುರ ಕ್ರಾಸ್ನ ಹೊಲದಲ್ಲಿದ್ದ ಕವಿತಾ(27) ಮತ್ತು ಗಂಗಮ್ಮ(45) ಅವರು ಸಿಡಿಲಿಗೆ ಬಲಿಯಾದವರು. ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಸ್ಥಳಕ್ಕೆ ಧಾವಿಸಿ ಬಂದು, ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಘೋಷಣೆ ಮಾಡಿದ್ದಾರೆ..