ಬೆಂಗಳೂರು : ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಭಾರೀ ಬಹುಮತ ಸಾಧಿಸಿ ವಿಜಯಶಾಲಿಗಳಾಗಿದ್ದಾರೆ.ಎರಡೂ ಕ್ಷೇತ್ರದಲ್ಲಿ ಭಾರೀ ಮುಖಭಂಗ ಅನುಭವಿಸಿರುವ ಕಾಂಗ್ರೆಸ್ ಇದೀಗ ಸೋಲಿನ ಕಾರಣ ಹುಡುಕತೊಡಗಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಸೋಲಿನ ಹೊಣೆಯನ್ನ ನಾನೇ ಹೊತ್ತುಕೊಳ್ಳುತ್ತೇನೆ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದರೆ, ಇದು ಪ್ರಜಾಪ್ರಭುತ್ವದ ಸೋಲು, ಅಧಿಕಾರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸರಣಿ ಟ್ವೀಟ್ ಮೂಲಕ ಹೇಳಿಕೆ ನೀಡಿರುವ ಸಿದ್ದರಾಮಯ್ಯನವರು, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವನ್ನು ಸ್ವೀಕರಿಸಲೇಬೆಕು. ನಾವೂ ಒಪ್ಪಿಕೊಂಡಿದ್ದೇವೆ. ಇದರಿಂದ ಪಕ್ಷದ ಕಾರ್ಯಕರ್ತರು ಕಂಗೆಡಬೇಕಾಗಿಲ್ಲ. ಇದರಿಂದ ಯಾವ ಪಕ್ಷವೂ ಬಲಶಾಲಿಯಾಗುವುದಿಲ್ಲ, ಯಾವ ಪಕ್ಷವೂ ಬಲಹೀನವಾಗುವುದೂ ಇಲ್ಲ. ಇದು ಸಮಗ್ರ ರಾಜ್ಯದ ಜನಾಭಿಪ್ರಾಯ ಅಲ್ಲ, ಇದು ಎರಡು ಸ್ಥಾನಗಳಿಗೆ ನಡೆದ ಚುನಾವಣೆ,ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಉಪಚುನಾವಣೆ ಫಲಿತಾಂಶದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಡಿ.ಕೆ ಸುರೇಶ್ , ಆರ್ ಆರ್ ನಗರದ ಸೋಲನ್ನ ಹೊರಲು ನಾನು ಸಿದ್ದನಾಗಿದ್ದೇನೆ.ಮತದಾರರ ತೀರ್ಪನ್ನ ನಾವೆಲ್ಲರೂ ಸ್ವೀಕಾರ ಮಾಡಲೇಬೇಕು.ಪ್ರತಿಯೊಂದು ಹಂತದಲ್ಲೂ ಬೆಂಬಲ ನೀಡಿದ ಕಾರ್ಯಕರ್ತರಿಗೆ ಬೆಂಬಲಿಗರಿಗೆ ಮತ್ತು ಮತದಾರರಿಗೆ ವಿಶೇಷ ಧನ್ಯವಾದಗಳು ಎಂದಿದ್ದಾರೆ.
ಹೆಚ್ಚು ದಿನ ಹಣಬಲದ ಆಟ ನಡೆಯೋಲ್ಲ, ಇವತ್ತಿನ ಗೆಲುವು ಸ್ವತಃ ಬಿಜೆಪಿ ಅಭ್ಯರ್ಥಿಗೇ ಶಾಕ್ ಆಗಿರಬೇಕು ಎಂದು ಅವರು ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಡಾ.ಸಿ.ಎಂ.ರಾಜೇಶ್ ಗೌಡ, ಮುನಿರತ್ನ ಭರ್ಜರಿ ಜಯಗಳಿಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದು ಭಾರೀ ಮುಖಭಂಗ ಅನುಭವಿಸಿವೆ.