ಬೆಂಗಳೂರು : ಮೋಸ ಹೋಗುವ ಜನರು ಇರುವವರೆಗೂ ಮೋಸ ಮಾಡುವವರು ಇದ್ದೆ ಇರ್ತಾರೆ. ಎಷ್ಟೋ ಘಟನೆಗಳನ್ನು ನಾವೂ ಕಣ್ಣಾರೆ ನೋಡಿದ್ದೇವೆ, ಕಿವಿಯಾರೆ ಕೇಳಿದ್ದೇವೆ. ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರೇಳಿಕೊಂಡು ಮೋಸ ಮಾಡುವುದನ್ನ. ಇಂದು ಕೂಡ ಅಂತದ್ದೇ ಘಟನೆ ನಡೆದಿದ್ದು, ಮಾಜಿ ಡಿಸಿಎಂ ಹೆಸರೇಳಿ ಹಣ ದೋಚುತ್ತಿದ್ದ ಮಹಿಳೆಯ ಬಂಧನವಾಗಿದೆ.
ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಅಣ್ಣನ ಮಗಳೆಂದು ಹೇಳಿಕೊಂಡು ಹಲವಾರು ಮಂದಿಗೆ ವಂಚಿಸುತ್ತಿದ್ದ ಯುವತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪಲ್ಲವಿ ಬಂಧಿತ ಯುವತಿ. ಈಕೆ ಪ್ರಧಾನಮಂತ್ರಿ ಯೋಜನೆಯಡಿ ಸಾಲ ಕೊಡಿಸುವುದಾಗಿ ಜನರಿಂದ ಹಣ ಪಡೆದು ಮೋಸ ಮಾಡಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ.
ನಿರುದ್ಯೋಗಿಗಳು, ವಿದ್ಯಾವಂತ ಯುವಕರು, ಬಡ ಚಾಲಕರೇ ಈಕೆಯ ಟಾರ್ಗೆಟ್ ಆಗಿದ್ದರು. ಲೋನ್ ಕೊಡಿಸುವುದಾಗಿ ಸುಮಾರು 10 ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಗೇರಿ ಪೊಲೀಸರು ಆರೋಪಿತೆ ಪಲ್ಲವಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದಾರು ಹೇಗೆ..?
ಜನಾರ್ದನ್ ಎಂಬವರು ಬಾಡಿಗೆ ಕಾರಿನ ವ್ಯವಹಾರ ಮಾಡುತ್ತಿದ್ದರು. ಈ ಪಲ್ಲವಿ ಅವರ ಬಳಿ ನಾನು ಮಾಜಿ ಡಿಸಿಎಂ ಪರಮೇಶ್ವರ್ ಅವರ ಅಣ್ಣನ ಮಗಳು. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕ್ ನಿಂದ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಳು. ಕೊರೊನಾ ಸಂದರ್ಭದಲ್ಲಿ 2 ದಿನದ ಮಟ್ಟಿಗೆ ಕಾರು ಬಾಡಿಗೆಗೆ ಬೇಕು ಎಂದು ಕೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕಾರು ಚಾಲಕ ಯೋಗೇಶ್ ಪಲ್ಲವಿಯನ್ನು ಸಂಪರ್ಕಿಸಿದ್ದರು.
ಎರಡು ದಿನ ಬೆಂಗಳೂರು, ತುಮಕೂರಿಗೆ ಕಾರಿನಲ್ಲಿ ಸುತ್ತಾಡಿ ಬಾಡಿಗೆ ಹಣವನ್ನು ನೀಡಿದ್ದ ಪಲ್ಲವಿ,ನಾನು ಕರೆದಾಗ ಬಾಡಿಗೆಗೆ ಬರಬೇಕು ಎಂದಿದ್ದಳು. ಬಳಿಕ ಹಲವು ಬಾರಿ ಬಾಡಿಗೆ ಕರೆದು ಒಟ್ಟು 40 ಸಾವಿರ ಕಿ.ಮೀ ಸುತ್ತಾಡಿಸಿ 4 ಲಕ್ಷ ರೂ. ಬಾಡಿಗೆ ಉಳಿಸಿಕೊಂಡಿದ್ದಳು. ಯೋಗೇಶ್ ಬಾಡಿಗೆ ಹಣವನ್ನು ಕೇಳಿದಾಗ ಏನೇನೋ ಸಬೂಬು ಹೇಳುತ್ತಿದ್ದಳಂತೆ. ಬಾಡಿಗೆ ನೀಡಲೇಬೇಕು ಎಂದು ಹೇಳಿದಾಗ ಯೋಗೇಶ್ ಬಳಿ ಪ್ರೀತಿಯ ನಾಟಕವಾಡಲು ಆರಂಭಿಸಿದಳು. ನೀನು ಅಂದರೆ ನನಗೆ ಇಷ್ಟ. ನನ್ನನ್ನು ಮದುವೆಯಾಗು ಎಂದು ಹೇಳಲು ಆರಂಭಿಸಿದಳು. ಇದಕ್ಕೆ ಯೋಗೇಶ್ ನಿರಾಕರಿಸಿದಾಗ ಪಲ್ಲವಿ, ನನ್ನನ್ನು ಮದುವೆಯಾಗದೇ ಇದ್ದರೆ ನಿನ್ನ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು.
ಪಲ್ಲವಿಯ ಈ ನಡೆಯ ಬಗ್ಗೆ ಯೋಗೇಶ್ ಮಾಲಿಕ ಜನಾರ್ದನ್ಗೆ ತಿಳಿಸಿದ್ದರು. ಈಕೆಯ ವರ್ತನೆಯಿಂದ ಅನುಮಾನಗೊಂಡ ಜನಾರ್ದನ್ ಮತ್ತು ಯೋಗೇಶ್ ಸದಾಶಿವ ನಗರದಲ್ಲಿರುವ ಪರಮೇಶ್ವರ್ ಅವರ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪರಮೇಶ್ವರ್ ಪತ್ನಿ ಈಕೆ ಯಾರು ಎನ್ನುವುದೇ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ತುಮಕೂರಿನಲ್ಲಿದ್ದ ಪರಮೇಶ್ವರ್ ಅವರ ಬಳಿ ಈಕೆಯನ್ನು ಕರೆದುಕೊಂಡು ಹೋಗಲಾಗಿತ್ತು. ಪರಮೇಶ್ವರ್ ಈಕೆ ನನ್ನ ಅಣ್ಣನ ಮಗಳಲ್ಲ. ಕೂಡಲೇ ದೂರು ನೀಡಿ ಎಂದು ಸೂಚಿಸಿದ್ದರಂತೆ.
ಇಷ್ಟೆಲ್ಲಾ ಘಟನೆಗಳ ನಡುವೆ ಆಕೆಯನ್ನು ಬೆಂಗಳೂರಿಗೆ ಕರೆತರುವಾಗ ನನ್ನನ್ನು ಕಿಡ್ಯ್ನಾಪ್ ಮಾಡಿದ್ದಾರೆಂದು ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಆಕೆಯೇ ದೂರು ನೀಡಿದ್ದಳಂತೆ. ಆಮೇಲೆ ಯೋಗೇಶ್ ಗೆ ಕರೆ ಮಾಡಿ ಆಕೆಯನ್ನು ಪೊಲೀಸ್ ಠಾಣೆಗೆ ಕರೆತರಲು ಹೇಳಿದ್ದಾರೆ. ಠಾಣೆಗೆ ಬಂದ ನಂತರ ವಿಚಾರಣೆ ನಡೆಸಿ ಸತ್ಯ ಬಾಯಿಬಿಡಿಸಿದ್ದಾರೆ.