ಬಿಹಾರ: ಬಿಹಾರ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿ ಮುನ್ನಡೆ ಸಾಧಿಸಿದ್ದರೂ, ಚುನಾವಣಾ ಪೂರ್ವದಲ್ಲಿ ಮಾಡಿಕೊಂಡ ಮೈತ್ರಿಯಂತೆ ಎನ್ಡಿಎ ನಿತೀಶ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಿದೆ. ಈ ಹಿನ್ನಲೆ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ನಿತೀಶ್ ಕುಮಾರ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಹೊಸದಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ನಿತೀಶ್ ಕುಮಾರ್ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಬೇಕು. ನಂತರ ಹೊಸದಾಗಿ ಆಯ್ಕೆಯಾಗಿರುವ ಎನ್ಡಿಎ ಶಾಸಕರ ಶಾಸಕಾಂಗ ಪಕ್ಷ ಸಭೆ ನಡೆಸಬೇಕು. ಅಲ್ಲಿ ಹೊಸದಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಬೇಕು. ಆನಂತರವಷ್ಟೇ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ, ಪ್ರಮಾಣ ವಚನದ ದಿನದ ಬಗ್ಗೆ ಮಾಹಿತಿ ನೀಡಬೇಕು. ಇದ್ಯಾವ ಪ್ರಕ್ರಿಯೆಯೂ ನಡೆದಿಲ್ಲ. ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಇದುವರೆಗೂ ರಾಜಭವನಕ್ಕೆ ಮಾಹಿತಿ ಬಂದಿಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಆರನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ನಿತೀಶ್ ಕುಮಾರ್ ತಮ್ಮ 35 ವರ್ಷದ ರಾಜಕೀಯ ಜೀವನದಲ್ಲಿ ಒಮ್ಮೆ ಕೂಡ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿಲ್ಲ. 2000ರಲ್ಲಿ ಬಹುಮತವಿಲ್ಲದೇ ಮೊದಲ ಬಾರಿ ಮುಖ್ಯಮಂತ್ರಿಯಾದ ಅವರು ಎಂಟು ದಿನಗಳಲ್ಲಿಯೇ ರಾಜೀನಾಮೆ ನೀಡಿದರು. ಇದಾದ ಬಳಿಕ 2005ರಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಎನ್ಡಿಎ ಸರ್ಕಾರದಲ್ಲಿ ಎರಡನೇ ಬಾರಿ ಪೂರ್ಣ ಪ್ರಮಾಣದ ಸಿಎಂ ಆಗಿ ಕಾರ್ಯನಿರ್ವಹಿಸಿದರು. ಈ ವೇಳೆ ಕೂಡ ಅವರು ಚುನಾವಣೆ ಎದುರಿಸದೇ ಪದವಿ ಪಡೆದಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅವರು ಸಂವಿಧಾನದ 164 (4)ನೇ ವಿಧಿ ಅನ್ವಯ ಮೇಲ್ಮನೆಗೆ ನಾಮ ನಿರ್ದೇಶನಗೊಂಡು ಸಿಎಂ ಸ್ಥಾನ ಭದ್ರಪಡಿಸಿಕೊಂಡರು.
2014ರಲ್ಲಿ ಲೋಕಸಭೆಯಲ್ಲಿ ಜೆಡಿಯು ಸೋಲಿನ ಹೊಣೆ ಹೊತ್ತು ಕೆಳಗಿಳಿದ ಅವರು ಒಂದು ವರ್ಷದಲ್ಲಿಯೇ ಮತ್ತೆ ಸಿಎಂ ಆದರು. 2015ರಲ್ಲಿ ಜೆಡಿಯು, ಆರ್ಜೆಡಿ ಮತ್ತು ಕಾಂಗ್ರೆಸ್ ಮಹಾ ಬಂಧನದಲ್ಲಿ ಚುನಾವಣೆ ಗೆದ್ದು ಮುಖ್ಯಮಂತ್ರಿಯಾದರು. ಇದಾದ ಬಳಿಕ 2017ರಲ್ಲಿ ಬಿಜೆಪಿ ಜೊತೆ ಮೈತ್ರಿಯೊಂದಿಗೆ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರಿದರು. ಈಗ ಆರನೇ ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದಾರೆ.