ಬೆಂಗಳೂರು : ಆರ್ ಆರ್ ನಗರ ಉಪಚುನಾವಣೆಯ ಕಣ ಬಿಸಿ ಏರುತ್ತಿದೆ. ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿ ಪರ ಭರದ ಪ್ರಚಾರ ನಡೆಸುತ್ತಿವೆ. ಜೆಡಿಎಸ್ ಅಭ್ಯರ್ಥಿ ಜ್ಞಾನಭಾರತೀ ಕೃಷ್ಣಮೂರ್ತಿ ಪರ ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಪ್ರಚಾರಕ್ಕೆ ಇಳಿದಿದ್ದಾರೆ. ಆರ್ ಆರ್ ನಗರದಲ್ಲೇ ಮುನಿರತ್ನ ಕೂಡ ಸ್ಪರ್ಧಿಸಿದ್ದು, ನಿಖಿಲ್ ಯಾರ ಪರ ಪ್ರಚಾರ ಮಾಡುತ್ತಾರೆ ಎಂಬ ಗೊಂದಲಕ್ಕೆ ನಿಖಿಲ್ ಉತ್ತರಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ನನ್ನ ಗಾಡ್ಫಾದರ್ ಅಲ್ಲ. ನಾನೊಬ್ಬ ನಟ, ಮುನಿರತ್ನ ಅವರು ನಿರ್ಮಾಪಕರು ಅಷ್ಟೇ, ಕುರುಕ್ಷೇತ್ರ ಸಿನಿಮಾದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ಅದನ್ನು ನಾನು ಮಾಡಿದ್ದೇನೆ. ನನ್ನ ಹಾಗೂ ಮುನಿರತ್ನ ನಡುವಿನ ಸಂಬಂಧ ಸಿನಿಮಾಗೆ ಮಾತ್ರ ಸೀಮಿತ ಎಂದು ಹೇಳಿದರು. ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ನನ್ನ ವೈಯಕ್ತಿಕ ಕಾರಣಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ ವಿಷ ಹಾಕುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಈ ಬಗ್ಗೆ ಹಲವು ವದಂತಿಗಳನ್ನು ಕ್ಷೇತ್ರದಲ್ಲಿ ಹಬ್ಬಿಸಿದ್ದಾರೆ. ಅವುಗಳಿಗೆ ಕಿವಿಗೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬಾರದು. ಕೃಷ್ಣಮೂರ್ತಿ ಅವರ ಗೆಲುವಿಗೆ ಕೆಲಸ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ರೇಸ್ನಲ್ಲಿ ಇಲ್ಲ ಎಂದು ಎಲ್ಲರೂ ಅಂದುಕೊಂಡಿದ್ದಾರೆ ಅದು ತಪ್ಪು. ಜೆಡಿಎಸ್ ಗೆಲುವಿನ ತರಂಗ ಕಾಣುತ್ತಿದೆ. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿರುವುದು ಗೊತ್ತಾಗುತ್ತಿದೆ. ಕೃಷ್ಣಮೂರ್ತಿ ಅವರ ತಂದೆ ವೆಂಕಟೇಶ್ ಜೆಡಿಎಸ್ಗಾಗಿ 25 ವರ್ಷ ದುಡಿದಿದ್ದಾರೆ. ಸೋತ ತಕ್ಷಣ ಪಕ್ಷ ಬಿಟ್ಟು ಹೋಗುವ ಅಭ್ಯರ್ಥಿಗಳಿಗಿಂತ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದು ಗೆಲ್ಲುವ ವಿಶ್ವಾಸ ಇದೆ ಎಂದಿದ್ದಾರೆ.