ಬೆಂಗಳೂರು: ಹೊಸ ವರ್ಷ ಅಂದ್ರೆ ಸಿಲಿಕಾನ್ ಸಿಟಿಯ ಎಂ ಜಿ ರಸ್ತೆ ತುಂಬಿ ತುಳುಕುತ್ತಿರುತ್ತದೆ. ರಸ್ತೆಗಳೆಲ್ಲಾ ದೀಪಗಳಿಂದ ಕಂಗೊಳಿಸುತ್ತಿರುತ್ತವೆ. ಬೆಳಗ್ಗೆಯೇ ರಸ್ತೆಗಳೆಲ್ಲಾ ಜನಗಮಗಿಸೋಕೆ ಶುರುವಾದ್ರೆ ಡಿಸೆಂಬರ್ 31 ರ ಸಂಜೆಯಿಂದಲೇ ಜನ ಜಂಗುಳಿ ಶುರುವಾಗುತ್ತೆ. 12 ರಷ್ಟರೊಳಗೆ ಜನ ಎಂಜಾಯ್ ಮಾಡುತ್ತಾ ಹೊಸ ವರ್ಷವನ್ನ ಬರಮಾಡಿಕೊಳ್ಳುತ್ತಾರೆ. ಆದ್ರೆ ಈ ಬಾರಿ ಅದಕ್ಕೆ ಅವಕಾಶವಿಲ್ಲದಂತಾಗಿದೆ.
ಕರ್ನಾಟಕದಲ್ಲಿ ಕಳೆದೊಂದು ತಿಂಗಳಿಂದ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಆದರೆ, ಕೊರೋನಾ ಟೆಸ್ಟ್ಗೆ ಒಳಗಾದವರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ನಿಖರವಾದ ಅಂಕಿ-ಅಂಶ ಲಭ್ಯವಾಗುತ್ತಿಲ್ಲ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಎರಡನೇ ಹಂತದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ, ಬೆಂಗಳೂರಿನಲ್ಲೂ ಕೊರೋನಾ ಮತ್ತಷ್ಟು ಉಲ್ಬಣಿಸದಿರಲಿ ಎಂದು ಮುನ್ನೆಚ್ಚರಿಕೆ ಕೈಗೊಂಡಿರುವ ಸರ್ಕಾರ ಮಾಸ್ಕ್, ಸಾಮಾಜಿಕ ಅಂತರ ಇತ್ಯಾದಿ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನೇನು ಸದ್ಯದಲ್ಲೇ 2020 ಮುಕ್ತಾಯವಾಗುವುದರಿಂದ ಈ ಬಾರಿ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಯನ್ನು ಬಿಬಿಎಂಪಿ ನಿಷೇಧಿಸಲಾಗಿದೆ.
ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಮನವಿ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. 2021ಅನ್ನು ಸಂಬ್ರಮಿಸುವ ಭರದಲ್ಲಿ ಕೊರೊನಾ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ಈ ತೀರ್ಮಾನಕ್ಕೆ ಬಿಬಿಎಂಪಿ ಬಂದಿದ್ದು, ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದೆ. ಈ ಬಾರಿ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ವರ್ಷಾಚರಣೆಯ ಸಂಭ್ರಮ ಇಲ್ಲದಂತಾಗಿದೆ.