ಮೈಸೂರು: ಸಾಂಸ್ಕೃತಿಕ ನಗರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ ನೀಡಿದ್ದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.ಕಾಂಗ್ರೆಸ್ ಗೆ ಯಾಕೆ ಹೀಗಾಯ್ತು ಅನ್ನೊದೂ ಗೊತ್ತಿಲ್ಲ. ಅಧಿಕಾರ ಸಿಕ್ಕಾಗ ಜನರನ್ನು ಮರೆಯಬಾರದು. ಆದರೆ, ನರೇಂದ್ರ ಮೋದಿ ಇಂದು ಎಲ್ಲಾ ವರ್ಗದವರನ್ನು ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮೂಲಕ ದೇಶವನ್ನು ನಡೆಸುತ್ತಿದ್ದಾರೆ. ಆದ್ದರಿಂದ ಜನ ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕಾಂಗ್ರೆಸ್ ನವರದ್ದು ಗಲಭೆ ಸೃಷ್ಠಿಮಾಡುವ ರಾಜಕಾರಣ. ಕಾಂಗ್ರೆಸ್ ನವರಿಗೆ ಸ್ವಾತಂತ್ರ್ಯದ ನಂತರ ಅಧಿಕಾರ ದಾಹ ಹೆಚ್ಚಾಗಿದೆ ಎಂದು ಕಿಡಿಕಾರಿದರು.
ಇಂದಿರಾಗಾಂಧಿ ಕಾಲಘಟ್ಟದಲ್ಲಿ ಲೈಟು ಕಂಬ ನಿಲ್ಲಿಸಿದ್ರೂ ಕಾಂಗ್ರೆಸ್ ಗೆಲ್ಲುತ್ತೆ ಎನ್ನಲಾಗುತ್ತಿತ್ತು. ಆಗ ಬಿಜೆಪಿಯಲ್ಲಿ ಕೇವಲ 100ಜನ ಶಾಸಕರಿದ್ದರು. ಆದರೆ, ಈಗ ಬಿಜೆಪಿಯಲ್ಲಿ 1900ಜನ ಶಾಸಕರಿದ್ದಾರೆ. ಕಾಂಗ್ರೆಸ್ ನಲ್ಲಿ ಕೇವಲ 700ಜನ ಶಾಸಕರಿದ್ದಾರೆ. ಇದನ್ನು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅಧಿಕಾರ ಕಳೆದುಕೊಂಡಾಗ ಗಲಭೆಗಳನ್ನು ಸೃಷ್ಠಿ ಮಾಡುತ್ತಾರೆ. ಅಧಿಕಾರ ಉಳಿಸಿಕೊಳ್ಳಲು ಬೆಂಕಿಹಾಕಿರುವ ಘಟನೆಗಳು ಇವೆ. ಅಧಿಕ್ಕಾರಕ್ಕಾಗಿ ಗೂಂಡಾಗಿರಿ ಮಾಡಿರುವ ನಿದರ್ಶನಗಳೂ ಕಣ್ಮುಂದೆ ಇವೆ ಎಂದು ಟೀಕಿಸಿದರು.
ಇವರ ವರ್ತನೆಗೆ ಬೇಸತ್ತು ಪಕ್ಷದಿಂದ ಹೊರ ಬಂದ ಶಾಸಕರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದರು. ವಿಧಾನ ಸೌಧದಲ್ಲಿ ಒಬ್ಬ ಶಾಸಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು. ಈಗ ವಿಧಾನ ಪರಿಷತ್ ನಲ್ಲೂ ದಾಂಧಲೆ ಮಾಡಿದ್ದಾರೆ, ಗೂಂಡಾಗಿರಿ ಮಾಡಿ ಪರಿಷತ್ ಮಾನ ಹರಾಜು ಹಾಕಿದ್ದಾರೆ ಎಂದು ದೂರಿದರು.