ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೂತನ ಮಾಧ್ಯಮ ಸಲಹೆಗಾರರಾಗಿ ಯಾರು ನೇಮಕವಾಗುತ್ತಾರೆ ಎಂಬ ವಿಚಾರ ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ವಾರ್ತಾ ಇಲಾಖೆಯ ನಿವೃತ್ತ ನಿರ್ದೇಶಕ ಎನ್. ಭೃಂಗೀಶ್ ಅವರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ನೇಮಕವಾಗುವ ಮೂಲಕ ಅದಕ್ಕೆ ತೆರೆ ಬಿದ್ದುದ್ದು, ಭೃಂಗೀಶ್ ಅವರನ್ನು ತಮ್ಮ ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ.
ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾಗಿದ್ದಾಗ ಸಿಎಂ ಯಡಿಯೂರಪ್ಪ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಭೃಂಗೀಶ್ ಅವರು ಕೆಲಸ ಮಾಡಿದ್ದರು. ಅದೇ ಹಿನ್ನೆಲೆಯಲ್ಲಿ ಅವರನ್ನು ಇದೀಗ ನೂತನ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ. 1990ರಲ್ಲಿ ರಾಜ್ಯ ವಾರ್ತಾ ಇಲಾಖೆ ಸೇರಿದ್ದ ಭೃಂಗೀಶ್ ಅವರು 10ಕ್ಕೂ ಹೆಚ್ಚು ಮುಖ್ಯಮಂತ್ರಿಗಳಿಗೆ ಮಾಧ್ಯಮ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಅಪಾರ ಅನುಭವವನ್ನು ಹೊಂದಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡಿದ್ದ ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ಅವರು ಇತ್ತೀಚಿಗಷ್ಟೇ ಸಿಎಂ ಯಡಿಯೂರಪ್ಪಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.
ಮಹದೇವ್ ಪ್ರಕಾಶ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ಎನ್.ಭೃಂಗೀಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸುವಂತೆ ಸಿಎಂ ಮುಖ್ಯ ಕಾರ್ಯದರ್ಶಿಗೆ ಬಿಎಸ್ವೈ ಮಂಗಳವಾರ ಸೂಚಿಸಿದ್ದರು. ಅದರಂತೆ ಎನ್.ಭೃಂಗೀಶ್ ಅವರನ್ನು ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ಸಿಎಂ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಿ ಇಂದು ಅಧಿಕೃತ ಆದೇಶ ಹೊರಡಿಸಲಾಗಿದೆ. ವೈಯಕ್ತಿಕ ಕಾರಣಗಳಿಂದ ಮಹದೇವ ಪ್ರಕಾಶ್ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರದಲ್ಲಿ ಅವರು ಯಾವುದೇ ಕಾರಣಗಳನ್ನು ನೀಡಿರಲಿಲ್ಲ.