ಮಂಡ್ಯ: ಸುಮಲತಾ ಕ್ಷೇತ್ರದಲ್ಲಿ ಯಾವುದೇ ಕೆಲಸವನ್ನೂ ಮಾಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಟೀಕಿಸಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಯಲಿಯೂರಿನಲ್ಲಿ ಅಹವಾಲು ಸ್ವೀಕರಿಸುವ ವೇಳೆ ಬೆಂಗಳೂರು-ಮೈಸೂರು ದಶಪಥ ಕಾಮಗಾರಿ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಬಳಿ ಅಧಿಕಾರಿಯೊಬ್ಬರು ಸಂಸದೆ ಸುಮಲತಾ ವಿರುದ್ಧ ದೂರು ನೀಡಿದ್ದಾರೆ. ಸುಮಲತಾ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಹೆಚ್.ಡಿ. ದೇವೇಗೌಡರ ಕುಟುಂಬವನ್ನು ಸೋಲಿಸಲು ಮಂಡ್ಯದಲ್ಲಿ ಸುಮಲತಾ ಅವರನ್ನು ಗೆಲ್ಲಿಸಿದರು. ಆದರೆ ಅವರು ಯಾವುದೇ ಕೆಲಸ ಮಾಡುವುವವರಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ’ ಎಂದು ಫೋನ್ ನಲ್ಲಿ ಮಾತನಾಡಿದ್ದಾರೆ. ಪ್ರತಾಪ್ ಸಿಂಹ, ಸುಮಲತಾ ಅವರನ್ನು ಟೀಕಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಸುಮಲತಾ ವಿರುದ್ಧ ಅಧಿಕಾರಿ ದೂರು ಹೇಳಿದಾಗ ಪ್ರತಾಪ್ ಸಿಂಹ, ಸುಮಲತಾ ವಿರುದ್ಧವೇ ಮಾತನಾಡಿದ್ದಾರೆ ಎಂದು ಸುಮಲತಾ ಬೆಂಬಲಿಗರು ತಿಳಿಸಿದರು.
‘ಕಾಮಗಾರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಸುಮಲತಾ ಪ್ರಶ್ನಿಸಿದ್ದರು. ಇದರ ಬಗ್ಗೆ ಯೋಜನಾಧಿಕಾರಿ ಪ್ರತಾಪ್ ಸಿಂಹ ಅವರಿಗೆ ದೂರು ನೀಡಿದಾಗ ಅವರು ನಮ್ಮ ಸಂಸದೆ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ಪ್ರತಾಪ್ ಸಿಂಹ ಅವರು ತಮ್ಮ ಕ್ಷೇತ್ರದ ಸಮಸ್ಯೆ ನೋಡಿಕೊಳ್ಳಲಿ, ನಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಅವರು ಬಾರದಿರುವುದೇ ಒಳ್ಳೆಯದು’ ಎಂದು ಸುಮಲತಾ ಬೆಂಬಲಿಗರು ತಿಳಿಸಿದ್ದಾರೆ.