ಬೆಂಗಳೂರು ; ಖಗೋಳದಲ್ಲಿ ವಿಸ್ಮಯವೊಂದು ಜರುಗಲಿದೆ. ಅ.31ರಂದು ಬ್ಲೂ ಮೂನ್ ದರ್ಶನವಾಗಲಿದ್ದು ಮತ್ತೊಮ್ಮೆ ಚಂದ್ರ ಆಗಸದಲ್ಲಿ ಕೌತುಕ ಮೂಡಿಸಲಿದ್ದಾನೆ.
ಬ್ಲೂ ಮೂನ್ ಅಥವಾ ನೀಲಿ ಚಂದ್ರ ಎಂದರೆ, ಒಂದು ತಿಂಗಳಿನಲ್ಲಿ ಎರಡು ಹುಣ್ಣಿಮೆಗಳು ಬಂದರೆ ಅದನ್ನು ‘ನೀಲಿ ಚಂದ್ರ’, ‘ಬ್ಲೂ ಮೂನ್’ ಎನ್ನಲಾಗುತ್ತದೆ. ಚಂದ್ರನ ಬಣ್ಣವೇನು ನೀಲಿ ಬಣ್ಣಕ್ಕೆ ತಿರುಗುವುದಿಲ್ಲ. ತಿಂಗಳಿನಲ್ಲಿ ಎರಡು ಬಾರಿ ಹುಣ್ಣಿಮೆಯಾಗಿ, ಆ ಸಮಯದಲ್ಲಿ ಚಂದ್ರಗ್ರಹಣವಾದರೆ ಅದಕ್ಕೆ ಆಗ ಬ್ಲ್ಯೂ ಬ್ಲಡ್ ಮೂನ್, ರಕ್ತ ನೀಲಿ ಚಂದಿರ ಎಂದು ಕರೆಯಲಾಗುತ್ತದೆ.
2020ರಲ್ಲಿ ಅಕ್ಟೋಬರ್ 1 ಹಾಗೂ 2 ರ ರಾತ್ರಿ ವೇಳೆ ಹಾಗೂ ಅಕ್ಟೋಬರ್ 31ರಂದು ಹೀಗೆ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಬಂದಿರುವುದರಿಂದ ಬ್ಲೂ ಮೂನ್ ಚಂದಿರ ದರ್ಶನ ಸಿಗಲಿದೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಖಗೋಳ ವಿಸ್ಮಯವೊಂದನ್ನು ವೀಕ್ಷಿಸುವ ಅವಕಾಶ ಭಾರತೀಯರಿಗೆ ಲಭಿಸಿತ್ತು. ಹುಣ್ಣಿಮೆಯ ಚಂದಿರ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದ ಸೂಪರ್ ಪಿಂಕ್ ಚಂದ್ರನನ್ನು ನೋಡಿ ಆನಂದಿಸಿದ್ದರು. ನಂತರ ಜೂನ್ ತಿಂಗಳಿನಲ್ಲಿ ಸ್ಟ್ರಾಬೆರಿ ಚಂದ್ರ ಕಾಣಿಸಿದ್ದ ಈಗ ಮೈಕ್ರೋ ಮೂನ್ ಅಥವಾ ಬ್ಲೂ ಮೂನ್ ಸರದಿ.
ಅಕ್ಟೋಬರ್ 31ರಂದು ರಾತ್ರಿ 8.19 ರಿಂದ ಪೂರ್ಣ ಚಂದ್ರನನ್ನು ನೋಡಬಹುದು. ಪ್ರತಿ 30 ತಿಂಗಳಿಗೊಮ್ಮೆ ಫೆಬ್ರವರಿ ತಿಂಗಳನ್ನು ಹೊರತುಪಡಿಸಿ ಬ್ಲೂ ಮೂನ್ ಕಾಣಬಹುದಾಗಿದೆ ಎಂದು ನೆಹರೂ ತಾರಾಲಯದ ಅರವಿಂದ್ ಪರಾಂಜಪೆ ತಿಳಿಸಿದ್ದಾರೆ.