ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕದ (104*) ನೆರವಿನಿಂದ ದಿಟ್ಟ ಉತ್ತರ ನೀಡುತ್ತಿರುವ ಟೀಮ್ ಇಂಡಿಯಾ, ಎರಡನೇ ದಿನದಾಟದ ಅಂತ್ಯಕ್ಕೆ 91.3 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದೆ.
ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ ಗಿಲ್-ಪೂಜಾರ ಅರ್ಧಶತಕದ ಜೊತೆಯಾಟವಾಡಿ ಆಧರಿಸಿದರು. ಗಿಲ್ 45 ರನ್ ಗಳಿಸಿ ಔಟಾದರೆ, ಹನುಮ ವಿಹಾರಿ 21, ಪಂತ್ 29 ರನ್ ಗಳಿಸಿದರು.173 ರನ್ ಗೆ ಐದು ವಿಕೆಟ್ ಕಳೆದುಕೊಂಡಲ್ಲಿಂದ ಜೊತೆಯಾದ ರಹಾನೆ – ಜಡೇಜಾ ಜೋಡಿ ಅಜೇಯ ಶತಕದ ಜೊತೆಯಾಟ ಆಡಿ ತಂಡವನ್ನು ಆಧರಿಸಿದರು.
ಭಾರತದ ಜಸ್ಪ್ರಿತ್ ಬುಮ್ರಾ (56ಕ್ಕೆ 4) ಹಾಗೂ ಆರ್ ಅಶ್ವಿನ್ (35ಕ್ಕೆ 3) ಅವರ ಮಾರಕ ಬೌಲಿಂಗ್ ಗೆ ನಲುಗಿದ ಆಸ್ಟ್ರೇಲಿಯಾ ತಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಮೊದಲನೇ ದಿವನೇ 72.3 ಓವರ್ಗಳಿಗೆ 195 ರನ್ಗಳಿಗೆ ಆಲೌಟ್ ಆಗಿತ್ತು.
ಇನ್ನು ಕೊನೆ ಗಳಿಗೆಯಲ್ಲಿ ತಂಡಕ್ಕೆ ಸೇರ್ಪಡೆಯಾದ ಜಡೇಜಾ ನಾಯಕನಿಗೆ ಉತ್ತಮ ಬೆಂಬಲ ನೀಡುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇವರಿಬ್ಬರು ಮುರಿಯದ 6ನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿದರು.