ಮಂಗಳೂರು: ಜಿಲ್ಲೆಯಲ್ಲಿ ತಲ್ವಾರ್ ದಾಳಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಿನ್ನೆ ರಾತ್ರಿ ಸಹ ನಗರದ ಪಳ್ನೀರ್ ಬಳಿಯ ಯುನಿಟಿ ಆಸ್ಪತ್ರೆಯ ಮುಂಭಾಗವೇ ತಲ್ವಾರ್ ನಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ನೌಷಾದ್ (30) ಎಂಬುವವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ನೌಷಾದ್ ಅವರ ಮಾವ ಆಸ್ಪತ್ರೆಯಲ್ಲಿದ್ದು ಅವರನ್ನು ನೋಡಲು ಕುಟುಂಬ ಸಮೇತ ಬಂದಿದ್ದರು. ಆನಂತರ ಆಸ್ಪತ್ರೆಯಿಂದ ಹೊರಗೆ ಬಂದು ಬೈಕ್ ಹತ್ತುವಾಗ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ಐದು ಜನ ದುಷ್ಕರ್ಮಿಗಳು ನೌಷಾದ್ ಮೇಲೆ ತಲ್ವಾರ್ ಬೀಸಿದ್ದಾರೆ. ಆ ಐದು ಜನರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು, ಮೂವರು ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದಾಳಿಯಲ್ಲಿ ತಲ್ವಾರಿನ ಒಂದು ಪೀಸ್ ತುಂಡಾಗಿ ನೌಷಾದ್ ಎದೆ ಭಾಗಕ್ಕೆ ಹೊಕ್ಕಿ ಗಂಭೀರ ಗಾಯವಾಗಿತ್ತು. ಯುನಿಟಿ ಆಸ್ಪತ್ರೆಗೆ ಸೇರಿಸಿ ಶಸ್ತ್ರಚಿಕಿತ್ಸೆ ಕೊಡಿಸಲಾಗುತ್ತಿದೆ.
ನವೆಂಬರ್ 15ರಂದು ಕಂದಾವರ ಮಸೀದಿ ವಿಚಾರದಲ್ಲಿ ನೌಷಾದ್ನ ಮಾವ ಅಬ್ದುಲ್ ಅಜೀಜ್ಗೆ ಯುವಕರ ಗುಂಪೊಂದು ಚೂರಿ ಇರಿದು ಪರಾರಿಯಾಗಿತ್ತು. ಮಸೀದಿಯಲ್ಲಿ ನಮಾಝ್ ಮುಗಿಸಿ ಹೊರಬಂದು ಇನ್ನೇನು ಕಾರು ಹತ್ತಬೇಕು ಅನ್ನುವಷ್ಟರಲ್ಲಿ ಚೂರಿಯಿಂದ ಯದ್ವಾತದ್ವಾ ಇರಿದು ಪರಾರಿಯಾಗಿತ್ತು. ಗಾಯಗೊಂಡಿದ್ದ ಅಬ್ದುಲ್ ಅಜೀಜ್ಗೆ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರನ್ನು ನೋಡಲು ಬಂದ ನೌಷಾದ್ ಮೇಲೂ ದಾಳಿ ಮಾಡಿದ್ದಾರೆ.