ಕೋಲಾರ: ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುತ್ತಾರೆಂಬ ಉಹಾಪೋಹಗಳಿಗೆ ಸ್ವತಃ ಅವರೆ ತೆರೆ ಎಳೆದಿದ್ದಾರೆ. ನಾನು ಪಕ್ಷದಲ್ಲಿಯೇ ಇದ್ದೇನೆ ಆದರೆ ಪಕ್ಷದ ಚಟುವಟಿಕೆಗೆಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರುವಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಆಹ್ವಾನಿಸಿರುವುದು ನಿಜ. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ನಾನಿನ್ನೂ ನಿರ್ಣಯ ತೆಗೆದುಕೊಂಡಿಲ್ಲ. ನಮ್ಮ ಪಕ್ಷದಲ್ಲಿ ಆಂತರಿಕ ಸಮಸ್ಯೆ ಇರುವುದು ನಿಜ.ಪಕ್ಷ ಅಧಿಕಾರದಲ್ಲಿದ್ದಾಗ ನಮ್ಮವರಿಗೇ ಸ್ಥಾನಮಾನ ನೀಡಲಿಲ್ಲ. ಜೆಡಿಎಸ್ ಪಕ್ಷದಲ್ಲಿ ಸಹಜವಾಗಿಯೇ ಗೊಂದಲಗಳಿವೆ ಎಂದು ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಡಿ.ಕೆ.ಶಿವಕುಮಾರ್ ಅವರು ನಮ್ಮ ಫ್ಯಾಮಿಲಿ ಫ್ರೆಂಡ್, ಅವರು ನಮ್ಮ ತಂದೆ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ತುಂಬಾ ಹತ್ತಿರದವರಾಗಿದ್ದರು. ಹೀಗಾಗಿ ನಮಗೂ ಅವರಿಗೂ ನಿಕಟವಾದ ಸಂಬಂಧವಿದೆ. ಇದರ ಜತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ನನ್ನ ಗೆಲುವಿಗೆ ಕಾಂಗ್ರೆಸ್ನವರೂ ಹೆಚ್ಚಿಗೆ ಶ್ರಮ ಪಟ್ಟಿದ್ದೂ ಇದೆ. ಈ ಸಂಬಂಧದ ಹಿನ್ನೆಲೆಯಲ್ಲಿ ಡಿಕೆಶಿ ಅವರು ನನನ್ನು ಕಾಂಗ್ರೆಸ್ ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ. ಆದರೆ ನಾನಿನ್ನೂ ಪಕ್ಷ ಬಿಡುವ ತೀರ್ಮಾನ ಮಾಡಿಲ್ಲ ಎಂದು ಅವರು ಹೇಳಿದರು.
ಮುಂದುವರಿದು ಮಾತನಾಡಿದ ಅವರು ಪಕ್ಷದ ಆಂತರಿಕ ಸಮಸ್ಯೆಗಳಿಂದಾಗಿ ಎಚ್. ವಿಶ್ವನಾಥ್ ಅವರು ಪಕ್ಷ ಬಿಟ್ಟು ಹೋದರು. ಇಂತಹ ಕೆಲವು ಗೊಂದಲಗಳನ್ನು ಪಕ್ಷದ ವರಿಷ್ಠರು ಸರಿಪಡಿಸಬೇಕಿದೆ. ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ ಇಬ್ಬರೂ ನನ್ನ ಕಣ್ಣುಗಳಿದ್ದಂತೆ. ನಾನು ಸದ್ಯ ಪಕ್ಷದಲ್ಲಿಯೇ ಇದ್ದೇನೆ. ಇನ್ನೂ ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.