ಬೆಂಗಳೂರು : ಆರ್ ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಇಂದು ದೇವಸ್ಥಾನದಲ್ಲಿ ಇಬ್ಬರು ಪೂಜೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ತಂದೆ ಹನುಮಂತರಾಯಪ್ಪ ಜೊತೆ ನಾಗರಾಬಾವಿಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಕುಸುಮಾ ತುಂಬಾ ಭಾವುಕರಾಗಿದ್ದಾರೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದಿನ ನನಗೆ ಅತ್ಯಂತ ಭಾವುಕ ದಿನ. ತುಂಬಾ ಎಮೋಷನಲ್ ಆಗಿದ್ದೇನೆ. ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ಹಿನ್ನೆಲೆ ದೇವರನ್ನು ಪ್ರಾರ್ಥಿಸಿದ್ದೇನೆ. ಇಂಥ ಅವಕಾಶ ಸಿಕ್ಕಿರೋದಕ್ಕೆ ದೇವರಿಗೆ ಚಿರಋಣಿ ನಾನು. ಭಗವಂತನ ಆಶೀರ್ವಾದ ನನ್ನ ಮೇಲಿದೆ ಎಂಬ ನಂಬಿಕೆ ಇದೆ. ಅಭ್ಯರ್ಥಿ ಯಾರೇ ಇರಲಿ ಅದರತ್ತ ನಾನು ಗಮನ ಕೊಡೋದಿಲ್ಲ. ನನ್ನ ವಿರುದ್ಧ ನಿಂತಿರುವ ಅಭ್ಯರ್ಥಿ ಯಾರು ಅಂತ ನಾನು ನೋಡಲ್ಲ. ನನ್ನ ಕ್ಷೇತ್ರದ ಜನರಿಗೆ ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ನಾನು ಗಮನ ಹರಿಸುತ್ತೇನೆ ಎಂದಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿ ಮುನಿರತ್ನ ಕೂಡ ಇಂದೇ ನಾಮಪತ್ರ ಸಲ್ಲಿಸುತ್ತಿದ್ದು, ಮತ್ತಿಕೆರೆಯಲ್ಲಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.