ನವದೆಹಲಿ: ಅರ್ನಾಬ್ ಗೋಸ್ವಾಮಿ ಪ್ರಕರಣದ ನಂತರ ಕುನಾಲ್ ಕಮ್ರಾ ನ್ಯಾಯಾಂಗ ನಿಂದನೆ ಪ್ರಕರಣ ದೇಶದಲ್ಲಿ ಸದ್ದು ಮಾಡುತ್ತಿದೆ. ಸುಪ್ರೀಂಕೋರ್ಟ್ ಅನ್ನು ಸರಣಿ ಟ್ವೀಟ್ಗಳಲ್ಲಿ ಟೀಕಿಸಿರುವ ಕಾರಣಕ್ಕೆ ಕುನಾಲ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ಹಾಕಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅನುಮತಿ ನೀಡಿದ್ದರು. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾಸ್ಯ ಕಲಾವಿದ ಕುನಾಲ್ ಕಮ್ರಾ, ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆಯುವ ಅಥವಾ ಕ್ಷಮೆ ಯಾಚಿಸಲು ಬಯಸಿಲ್ಲ ಎಂದಿದ್ದಾರೆ.
‘ನನ್ನ ಟ್ವೀಟ್ಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ನಾನು ಬಯಸಿಲ್ಲ ಅಥವಾ ಅವುಗಳಿಗಾಗಿ ಕ್ಷಮೆ ಕೋರುವುದಿಲ್ಲ. ಅವರು ತಮ್ಮಷ್ಟಕ್ಕೆ ತಾವೇ ಮಾತನಾಡುತ್ತಿದ್ದಾರೆ ಎನಿಸುತ್ತದೆ’ ಎಂದು ಕುನಾಲ್ ಕಮ್ರಾ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮತ್ತು ಅಟಾರ್ನಿ ಜನರಲ್ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ.
‘ಸುಪ್ರೀಂಕೋರ್ಟ್ ಇದುವರೆಗೂ ನನ್ನ ಟ್ವೀಟ್ಗಳ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಅವರು ಹಾಗೆ ಮಾಡಿದಾಗ ಅವುಗಳು ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಘೋಷಣೆ ಮಾಡುವ ಮೊದಲು ಸುಪ್ರೀಂಕೋರ್ಟ್ ಸುಮ್ಮನೆ ನಕ್ಕುಬಿಡಬಹುದು ಎಂದು ಹೇಳಿಕೊಂಡಿದ್ದಾರೆ.
‘ಪ್ರೈಮ್ ಟೈಮ್ನ ಲೌಡ್ ಸ್ಪೀಕರ್ (ಅರ್ನಬ್ ಗೋಸ್ವಾಮಿ) ಪರವಾಗಿ ಪಕ್ಷಪಾತಿ ನಿರ್ಣಯ ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಕುರಿತು ನನ್ನ ಅಭಿಪ್ರಾಯಗಳನ್ನು ಟ್ವೀಟ್ ಮಾಡಿದ್ದೇನೆ. ಇತರೆ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯದ ವಿಚಾರಗಳು ಟೀಕೆಗೆ ಒಳಗಾಗದೆ ಸುಪ್ರೀಂಕೋರ್ಟ್ ಮೌನವಹಿಸಿರುವುದರಿಂದ ನನ್ನ ದೃಷ್ಟಿಕೋನ ಬದಲಾಗುವುದಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ..
‘ವಕೀಲರಿಲ್ಲ, ಕ್ಷಮೆಯಿಲ್ಲ, ದಂಡವಲ್ಲ, ಜಾಗದ ವ್ಯರ್ಥವೂ ಇಲ್ಲ’ ಎಂದು ಅವರು ತಮ್ಮ ಸುದೀರ್ಘ ಬರಹದ ಟಿಪ್ಪಣಿಯೊಂದಿಗೆ ಹೇಳಿಕೊಂಡಿದ್ದಾರೆ.
“ನನ್ನ ಒಂದು ಟ್ವೀಟ್ನಲ್ಲಿ ಸುಪ್ರಿಂಕೋರ್ಟ್ನಲ್ಲಿರುವ ಮಹಾತ್ಮಾ ಗಾಂಧೀಯವರ ಫೋಟೊ ಬದಲಿಗೆ ಹರೀಶ್ ಸಾಳ್ವೆ ಅವರ ಫೋಟೋ ಹಾಕಲು ಸಲಹೆ ನೀಡಿದ್ದೆ. ಈಗ ಇನ್ನೊಂದು ಸಲಹೆ ನೀಡುತ್ತೇನೆ, ಪಂಡಿತ್ ನೆಹರೂ ಅವರ ಫೋಟೋವನ್ನು ಕೂಡಾ ತೆಗೆದು ಮಹೇಶ್ ಜೇಠ್ಮಲಾನಿ ಫೋಟೋ ಹಾಕಿದರೆ ಒಳಿತು,” ಎಂದು ಅವರು ವ್ಯಂಗ್ಯವಾಡಿದ್ದಾರೆ.