ತುಮಕೂರು : ಚುನಾವಣಾ ಸಂದರ್ಭದಲ್ಲಿ ಪಕ್ಷಗಳು ಸ್ಟಾರ್ ಪ್ರಚಾರಕರನ್ನು ಕರೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ಅಮೂಲ್ಯ ಪ್ರಚಾರಕ್ಕೆ ಇಳಿದಿದ್ದಾರೆ. ಈ ಬಗ್ಗೆ ತುಮಕೂರಿನ ಶಿರಾದಲ್ಲಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಇಂದು ತುಮಕೂರಿನ ಶಿರಾದ ಸೋರೆಕುಂಟೆಯಲ್ಲಿ ತಮ್ಮ ಅಭ್ಯರ್ಥಿ ಅಮ್ಮಾಜಮ್ಮ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿರುವ ಅವರು, ಮಂಡ್ಯದಲ್ಲಿ ಲೋಕಸಭೆ ಅಭ್ಯರ್ಥಿ ಪರ ಕಾಂಗ್ರೆಸ್-ಬಿಜೆಪಿ, ರೈತ ಸಂಘ ಒಟ್ಟಾಗಿ ಕೆಲಸ ಮಾಡಿದರು. ಮಂಡ್ಯ ಪಕ್ಷೇತರ ಅಭ್ಯರ್ಥಿ ಪರ ಮಾಧ್ಯಮದವರು ಅನುಕಂಪ ತೋರಿಸಿದ ಕಾರಣ ಅಲ್ಲಿ ಅವರು ಗೆದ್ದರು. ಸ್ಟಾರ್ ಕ್ಯಾಂಪೇನ್ನಿಂದ ಯಾರು ಗೆದ್ದಿಲ್ಲ. ಸ್ಟಾರ್ ಗಳು ಎನಿಸಿಕೊಂಡವರು ಮತ ಕೇಳ್ತಾರೆ ಹೋಗ್ತಾರೆ ಅಷ್ಟೇ. ಸ್ಟಾರ್ಗಳು ಜನರ ಕಷ್ಟ-ಸುಖ ಕೇಳಲು ಬರಲ್ಲ ಎಂದು ಕಿಡಿಕಾರಿದ್ದಾರೆ.
ಶಿರಾದಲ್ಲಿ ಜೆಡಿಎಸ್ ಸೋಲುತ್ತೆ ಎಂಬ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಅಶೋಕ್ ಗೂ ಶಿರಾಗೂ ಸಂಬಂದವೇನು..? ಎಷ್ಟು ಹಳ್ಳಿಗಳಿವೆ, ಅಲ್ಲಿರುವ ಜನರ ಕಷ್ಟವೇನು, ಪರಿಸ್ಥಿತಿ ಏನು ಅಂತ ಅವರಿಗೆ ಗೊತ್ತಿದ್ಯಾ..? ಬಂದು ಟಾಟಾ ಮಾಡಿ ಹೋಗಿದ್ದಾರೆ. ಎಲ್ಲೋ ಬೆಂಗಳೂರಲ್ಲಿ ಕುಳಿತು ಶಿರಾದಲ್ಲಿ ಜೆಡಿಎಸ್ ಗೆಲ್ಲಲ್ಲ ಅಂತಾರೆ. ರೈತರ ಪಕ್ಷದ ಪರ ಅಶೋಕ್ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ. ಆಸೆ ಆಮಿಷಕ್ಕೆ ಶಿರಾ ಜನರು ಬಲಿಯಾಗಿಲ್ಲ ಎಂದು ಸಚಿವ ಆರ್ ಅಶೋಕ್ ಗೆ ಟಾಂಗ್ ನೀಡಿದ್ದಾರೆ.
ಕಳೆದ ಎಂಪಿ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಪರ್ಧಿಸಿದ್ದ ಸುಮಲತಾ ಪರವಾಗಿ ನಟ ದರ್ಶನ್ ಮತ್ತು ಯಶ್ ಪ್ರಚಾರ ಮಾಡಿದ್ದರು. ಅಂದು ಕೂಡ ದರ್ಶನ್ ಪ್ರಚಾರದ ಬಗ್ಗೆ ಯಾರೀ ಅದು ಡಿ ಬಾಸ್ ಅಂತ ಕುಮಾರಸ್ವಾಮಿ ವ್ಯಂಗ್ಯವಾಡಿದ್ರು. ಇಂದು ಆರ್ ಆರ್ ನಗರ ಉಪಚುನಾವಣೆಯ ಪ್ರಚಾರದಲ್ಲೂ ದರ್ಶನ್ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.