ಬೆಂಗಳೂರು: ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ನಾಗರಿಕ ಸೇವೆಗಳ ಮುಖ್ಯಪರೀಕ್ಷೆ ಮತ್ತು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಮುಖ್ಯ ಪರೀಕ್ಷೆಯನ್ನ ಈ ಬಾರಿ ಒಟ್ಟೊಟ್ಟಿಗೆ ಎದುರಿಸಬೇಕಾದ ಸನ್ನಿವೇಶ ಎದುರಾಗಿತ್ತು. ಹೀಗಾಗಿ ಸಹಜವಾಗಿ ಆಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿದ್ರು. ಎರಡು ಪರೀಕ್ಷೆಗಳಿಗೆ ತಯಾರಾಗೋದು ಹೇಗೆ ಎನ್ನುವ ಚಿಂತೆಯಲ್ಲಿದ್ರು. ಸಧ್ಯ ಸಿಎಂ ಈ ಆಭ್ಯರ್ಥಿಗಳು ರಿಲೀಫ್ ನೀಡಿದ್ದು, ಕೆಪಿಎಸ್ಸಿ ಪರೀಕ್ಷೆಗಳನ್ನ ಒಂದು ತಿಂಗಳುಗಳ ಕಾಲ ಮುಂದೂಡುವಂತೆ ಆಯೋಗಕ್ಕೆ ಸೂಚಿಸಿದ್ದಾರೆ. ಅದ್ರಂತೆ, ಆಯೋಗ ಅಧಿಕೃತ ಆದೇಶ ಶ್ರೀಘ್ರದಲ್ಲೇ ಹೊರಡಿಸಲಿದೆ.
ಪರೀಕ್ಷೆಯನ್ನು ಮುಂದೂಡುವಂತೆ ಅನೇಕ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸಿಎಂ ಈ ನಿರ್ಧಾರಕ್ಕೆ ಬಂದಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಮುಗಿದ ಒಂದು ತಿಂಗಳ ನಂತರ ಕೆಪಿಎಸ್ಸಿ ಪರೀಕ್ಷೆಗೆ ದಿನಾಂಕ ನಿಗಧಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರ ಲೋಕಸೇವಾ ಅಯೋಗ ಪರೀಕ್ಷೆಗಳು 2021 ರ ಜನವರಿ 8 ರಿಂದ 10 ರವರೆಗೆ ಹಾಗೂ 16, 17 ರಂದು ನಡೆಯಲಿವೆ. ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಗಳು 2020 ರ ಡಿ.21 ರಿಂದ 24 ಮತ್ತು ಜನವರಿ 02 ರಿಂದ 05 ರವರೆಗೆ ನಿಗದಿಯಾಗಿವೆ.
ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆಗಳ ನಡುವೆ ಅಂತರ ಕಡಿಮೆ ಇರುವ ಕಾರಣ ಎರಡೂ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿ ಗಳಿಗೆ ಸಿದ್ಧತೆ ನಡೆಸಲು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ‘ಕೆಪಿಎಸ್ಸಿ ವೇಳಾಪಟ್ಟಿಯನ್ನು ಪರಿಷ್ಕರಿಸಿ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಬೇಕೆಂದು’ ಅಭ್ಯರ್ಥಿಗಳು ಆಗ್ರಹಿಸಿದ್ದರು.