ಬೆಂಗಳೂರು: ಬಿಜೆಪಿ ಶಾಸಕ ಸಿದ್ದು ಸವದಿ ಅವರು ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಯಾದ ಸವಿತಾ ಹುರಕಡ್ಲಿ ಅವರ ಮೈಮುಟ್ಟಿ ಎಳೆದಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳೆಯನ್ನು ಹಿಡಿದು ಎಳೆದಾಡಿದ್ದು ತಪ್ಪು. ನಾವು ಈ ಪ್ರಕರಣವನ್ನು ಗಂಭೀರವಾಗಿ ನೋಡುತ್ತಿದ್ದೇವೆ. ಮಹಿಳೆಯೊಬ್ಬರನ್ನು ಎಳೆದಾಡಿರುವುದು ಬಿಜೆಪಿಯವರ ಸಂಸ್ಕೃತಿ ಏನು ಎಂಬುದನ್ನು ತೋರಿಸುತ್ತದೆ. ಭೀಮಾ ನಾಯಕ್ ತೊಡೆ ತಟ್ಟಿದ್ದು ಬೇರೆ. ಆ ವಿಚಾರದಲ್ಲಿ ನಮ್ಮ ಪ್ರತಿಪಕ್ಷ ನಾಯಕರು ಮಾತನಾಡಿದ್ದಾರೆ. ಮತ್ತೆ ಆ ವಿಚಾರಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ತೇರದಾಳದಲ್ಲಿ ನಡೆದ ಘಟನೆ ಸರಿಯೋ, ತಪ್ಪೋ ಎಂಬುದನ್ನು ಸಿಎಂ ಯಡಿಯೂರಪ್ಪನವರು ನಿರ್ಧರಿಸಬೇಕು. ಈಗಾಗಲೇ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂದರ್ಭದಲ್ಲಿ ಪುರಸಭೆ ಸದಸ್ಯೆಯನ್ನು ಕೈ, ಸೊಂಟ ಹಿಡಿದು ಎಳೆದಾಡಿದ್ದಾರೆ ಎಂದು ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಅವರ ವಿರುದ್ಧ ಆರೋಪ ಕೇಳಿಬಂದಿದೆ.