ಕಾರ್ಕಳ: ಈ ಕ್ರೇಜ್ ಅನ್ನೋದು ಅದೆಷ್ಟೋ ಬಾರಿ ಮನುಷ್ಯನ ಪ್ರಾಣಕ್ಕೆ ಕುತ್ತು ತಂದಿದೆ. ಹೊಸ ವರ್ಷವನ್ನ ಬರಮಾಡಿಕೊಂಡು, ಸಂತಸದಿಂದ ಇರಬೇಕಾದ ಹುಡುಗರು ಕ್ರೇಜ್ ನಲ್ಲಿ ಮಾಡಲು ಹೊರಟ ಕೆಲಸದಿಂದ ಮಸಣ ಸೇರಿದ್ದಾರೆ.
ಹೊಸ ವರ್ಷಕ್ಕೆ ಶುಭಾಶಯ ಕೋರಿ ‘ಹ್ಯಾಪಿ ನ್ಯೂ ಇಯರ್’ ಎಂದು ರಸ್ತೆಯಲ್ಲಿ ಸಂದೇಶ ಬರೆಯಲು ಹೋಗಿ ಇಬ್ಬರು ಯುವಕರು ಅಪಘಾತಕ್ಕೆ ಬಲಿಯಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಶರಣ್ (32) ಮತ್ತು ಸಿದ್ದು (28) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮೂಲತಃ ಬಾಗಲಕೋಟೆಯವರಾದ ಶರಣ್ ಮತ್ತು ಸಿದ್ದು ಹಾಗೂ ಇತರ ಇಬ್ಬರು ಸ್ನೇಹಿತರು ನಿನ್ನೆ ತಡರಾತ್ರಿ ಕಾರ್ಕಳದ ಮಿಯಾರು ಕಾಜರ ಬೈಲು ಎಂಬಲ್ಲಿ ‘ಹ್ಯಾಪಿ ನ್ಯೂ ಈಯರ್’ ಎಂದು ರಸ್ತೆಯಲ್ಲಿ ಬರೆಯಲು ಮುಂದಾಗಿದ್ದರು. ಆದರೆ, ಈ ವೇಳೆ ವೇಗವಾಗಿ ಬಂದ ಈಕೊ ಕಾರೊಂದು ಢಿಕ್ಕಿಯಾಗಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಗಾಯಗೊಂಡ ತೌಸೀಫ್ ಮತ್ತು ಬಸವರಾಜು ಎಂಬವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.