ರಾಂಚಿ: ಇತ್ತೀಚೆಗೆ ಸರ್ಕಾರಿ ಉದ್ಯೋಗ ತೆಗೆದುಕೊಳ್ಳುವುದೇ ಕಷ್ಟವಾಗಿದೆ. ಈ ಮಧ್ಯೆ ಜಾರ್ಖಂಡ್ ನಲ್ಲಿ ಸರ್ಕಾರಿ ಉದ್ಯೋಗಕ್ಕೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ. ಸರ್ಕಾರಿ ನೌಕರಿ ಬೇಕಾಗಿರುವವರು ತಂಬಾಕು ಮತ್ತು ಧೂಮಪಾನ ಬಿಡಬೇಕು ಎಂಬ ಆದೇಶ ಹೊರಡಿಸಿದೆ. ತಂಬಾಕು ಜಗಿಯುವ ಮತ್ತು ಧೂಮಪಾನ ಮಾಡುವ ಚಟವನ್ನು ತಡೆಯುವ ಪ್ರಯತ್ನವಾಗಿ ಈ ನಿಯಮ ಜಾರಿ ಮಾಡಲಾಗಿದೆ.
ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ತಂಬಾಕು ನಿಯಂತ್ರಣ ಸಂಯೋಜನಾ ಸಮಿತಿಯ ಸಭೆಯಲ್ಲಿ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಇನ್ನು ಮುಂದೆ ಟೀ, ಬಿಸ್ಕತ್ನಂತಹ ಖಾದ್ಯ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ ಎಂದೂ ನಿರ್ಧರಿಸಲಾಗಿದೆ. ಈ ನಿಯಮ 2021ರ ಏಪ್ರಿಲ್ 1ರಿಂದ ಜಾರ್ಖಂಡ್ನಲ್ಲಿ ಜಾರಿಯಾಗಲಿದೆ.
ಸರ್ಕಾರಿ ಉದ್ಯೋಗದಲ್ಲಿ ಇರುವವರು ಕೂಡ ತಾವು ಯಾವುದೇ ರೀತಿಯಲ್ಲಿ ತಂಬಾಕು ಸೇವನೆ ಮಾಡುವುದಿಲ್ಲ ಎಂಬ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ ಎಂದು ಆರೋಗ್ಯ, ಶಿಕ್ಷಣ ಮತ್ತು ಕೌಟುಂಬಿಕ ಕಲ್ಯಾಣ ಇಲಾಖೆ ಹೇಳಿಕೆ ತಿಳಿಸಿದೆ.
ಶಾಲಾ ಆವರಣದ 100 ಮೀಟರ್ ಸುತ್ತಮುತ್ತ ಎಲ್ಲಿಯೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಖಾತರಿ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ನಿಯಮ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯ ಸರ್ಕಾರವು ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ತಡೆಯಲು ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು.