ಬೆಂಗಳೂರು : ಆರ್ ಆರ್ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಭರ್ಜರಿ ಪ್ರಚಾರ ನಡೆಯುತ್ತಿದೆ. ಈ ಮಧ್ಯೆ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಆಗಾಗ ಮಾತುಗಳು ಬಂದು ಹೋಗುತ್ತಿರುತ್ತವೆ. ಸಿಎಂ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತ ಒಂದಷ್ಟು ಜನರ ಅಭಿಪ್ರಾಯವಾದ್ರೆ, ಡಿ ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಪ್ರಾಯ ಹಲವು ಮಂದಿಯದ್ದಾಗಿದೆ. ಇಂದು ಕೂಡ ಮತ್ತೆ ಅದೇ ವಿಚಾರ ಪ್ರಸ್ತಾಪವಾಗಿದೆ.
ಆರ್ ಆರ್ ನಗರ ಉಪಚುನಾವಣೆಗೆ ಮತ ಕೇಳಲು ಇಂದು ಜಮೀರ್ ಅಹ್ಮದ್ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಜಮೀರ್ ಮೊದಲ ಬಾರಿಗೆ ಕ್ಯಾಂಪೇನ್ ನಡೆಸುತ್ತಿದ್ದು, ಪ್ರಚಾರದ ವೇಳೆ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯೂ ಆಗಬೇಕು ಅಂತ ಶಿಸ್ತು ಕ್ರಮ ಸಮಿತಿಯ ಮುಂದೆಯೂ ಹೇಳ್ತೀನಿ ಅಂತ ಮತ್ತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂಬ ಮಾತು ಮುನ್ನಲೆಗೆ ಬಂದಿದೆ.
ಡಿ ಕೆ ಶಿವಕುಮಾರ್ ಸಿಎಂ ಆಗ್ಬೇಕು ಅಂತ ಯಾರು ಬೇಕಾದ್ರೂ ಹೇಳಿರಬಹುದು. ಆದರೆ ಸಿದ್ದರಾಮಯ್ಯ ಅವರೇ ಸಿಎಂ ಆಗ್ಬೇಕು ಅನ್ನೋದು ನನ್ನ ಅಭಿಪ್ರಾಯ. ನಾನು ಹೇಳಿರೋದು ನನ್ನ ಅಭಿಪ್ರಾಯ ಹಾಗೂ ಈ ರಾಜ್ಯದ ಜನರ ಅಭಿಪ್ರಾಯ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಆಗ ಕೇಳಿ ಬಂದ ಅಭಿಪ್ರಾಯವನ್ನೇ ನಾನು ಹೇಳ್ತಾ ಇರೋದು ಎಂದಿದ್ದಾರೆ.
ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ಅವರು ಸಿಎಂ ಆಗ್ಬೇಕು ಅಂತ ಬಯಸಿದ್ರೆ ಅದು ಬಯಸಿದವರ ಅಭಿಪ್ರಾಯ. ನಿರ್ಧಾರ ತೆಗೆದುಕೊಳ್ಳಬೇಕಿರೋದು ನಮ್ಮ ಜನ ಹಾಗೂ ನಮ್ಮ ಹೈಕಮಾಂಡ್. ನಮ್ಮದು ಹೈಕಮಾಂಡ್ ಪಕ್ಷ, ನಾವೂ ನೀವೂ ಹೇಳೊದಕ್ಕೆ ಆಗಲ್ಲ. ಒಂದು ವೇಳೆ ನೋಟೀಸ್ ಕೊಟ್ಟರು, ಶಿಸ್ತು ಕ್ರಮದ ಸಮಿತಿ ಮುಂದೆಯೂ ಇದನ್ನೇ ಹೇಳ್ತೀನಿ ಎಂದಿದ್ದಾರೆ.