ಆಫ್ರಿಕನ್ ರಾಷ್ಟ್ರ ಮೊಜಾಂಬಿಕ್ ನ ನಂಜಾಬಾ ಗ್ರಾಮದಲ್ಲಿ ಮಾನವ ಸಮಾಜವೇ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಪುಟ್ಬಾಲ್ ಮೈದಾನದಲ್ಲಿ ರಕ್ತದೋಕುಳಿ ಹರಿಸಿ ಸುಮಾರು 50 ಜನ ಅಮಾಯಕರ ಶಿರಚ್ಚೇದನ ಮಾಡಿದ್ದಾರೆ.
ನಂಜಾಬಾ ಗ್ರಾಮಕ್ಕೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಉಗ್ರರು ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತ ಗ್ರಾಮಸ್ಥರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ, ಗ್ರಾಮಸ್ಥರನ್ನು ಬಂಧಿಗಳನ್ನಾಗಿಸಿ ಕರೆದೊಯ್ದು ಫುಟ್ಬಾಲ್ ಮೈದಾನದಲ್ಲಿ ಕುಳ್ಳಿರಿಸಿ ಕತ್ತು ಕತ್ತರಿಸಿದ್ದಾರೆ.
2017 ರಿಂದಾಚೆಗೆ ಕ್ಯಾಬೊ ಡೆಲ್ಗಾಡೊನಲ್ಲಿ ನಡೆದ ಅತ್ಯಂತ ಹೀನ ಕೃತ್ಯ ಇದು ಎಂದೇ ಹೇಳಲಾಗಿದೆ. ಈ ಪ್ರಾಂತ್ಯದಲ್ಲಿ 2017 ರಿಂದಾಚೆಗೆ 2,000 ಜನರನ್ನು ಕೊಲೆಗೈಯ್ಯಲಾಗಿದ್ದು ಸುಮಾರು 4,30,000 ಮಂದಿ ನಿರಾಶ್ರಿತರಾಗಿದ್ದಾರೆ.
ಐಎಸ್ ಜೊತೆ ಸಂಬಂಧ ಹೊಂದಿರುವ ಉಗ್ರರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಹೆಜ್ಜೆ ಇಟ್ಟಿದ್ದು, ಈ ಪ್ರದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಉದ್ದೇಶದಿಂದ, ಈ ಗುಂಪು ನಿರುದ್ಯೋಗ ಮತ್ತು ಬಡತನ ಬಳಸಿಕೊಂಡು ಯುವಕರನ್ನು ನೇಮಿಸಿಕೊಳ್ಳುತ್ತಿದೆ.