ಬೆಂಗಳೂರು: ಕೊರೊನಾ ವೈರಸ್ ಎಲ್ಲೆಡೆ ವ್ಯಾಪಿಸುತ್ತಿದ್ದ ಕಾರಣ ದೇವಸ್ಥಾನಗಳ ಬಾಗಿಲನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಅನ್ ಲಾಕ್ ಪ್ರಕ್ರಿಯೆಯಲ್ಲಿ ದೇವಸ್ಥಾನಗಳನ್ನು ತೆರೆಯಲಾಗಿತ್ತು. ಆದ್ರೆ ಇಸ್ಕಾನ್ (ISKCON) ದೇವಸ್ಥಾನ ಮಾತ್ರ ಭಕ್ತರಿಗೆ ತೆರೆದುಕೊಂಡಿರಲಿಲ್ಲ. ಆದ್ರೆ ಇದೀಗ ಇಸ್ಕಾನ್ ದೇವಸ್ಥಾನ 6 ತಿಂಗಳ ಬಳಿಕ ಅಕ್ಟೋಬರ್ 5 ರಂದು ತೆರೆಯಲಿದೆ.
ಅಕ್ಟೋಬರ್ 5ರಿಂದ ವಾರದ ದಿನಗಳಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30 ರವರೆಗೆ, ಸಂಜೆ 4ರಿಂದ 8ರವರೆಗೆ ಹಾಗೂ ವಾರಾಂತ್ಯಗಳಲ್ಲಿ ಬೆಳಗ್ಗೆ 9:30ರಿಂದ ರಾತ್ರಿ 8ರವರೆಗೆ ಭಕ್ತರು ಕೃಷ್ಣನ ದರ್ಶನ ಪಡೆಯಲು ಅವಕಾಶವಿದೆ.
ಕಟ್ಟುನಿಟ್ಟಿನ ಶಿಷ್ಟಾಚಾರಗಳನ್ನು ಪರಿಪಾಲನೆ ಮಾಡುವುದು ಕಡ್ಡಾಯ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ. ಮುನ್ನೆಚ್ಚರಿಕಾ ಕ್ರಮವಾಗಿ 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಮತ್ತು ಗರ್ಭಿಣಿಯರು ಸುರಕ್ಷತೆಯ ದೃಷ್ಟಿಯಿಂದ ದೇವಸ್ಥಾನಕ್ಕೆ ಭೇಟಿ ನೀಡದಿರಲು ಸಲಹೆ ಸೂಚಿಸಲಾಗಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕುರಿತು ಜನರಿಗೆ ಅರಿವು ಮೂಡಿಸಲು ಮಂದಿರದ ಮುಖ್ಯವಾದ ಸ್ಥಳಗಳಲ್ಲಿ ವಿಧ ವಿಧವಾದ ಗುರುತು/ ಚಿಹ್ನೆಗಳನ್ನು ಹಾಕಲಾಗುವುದು ಎಂದು ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಮಧುಪಂಡಿತ ದಾಸ, ಇಸ್ಕಾನ್ ಶ್ರೀ ರಾಧಾಕೃಷ್ಣ ದೇವಸ್ಥಾನದ ಆಧ್ಯಾತ್ಮಿಕ ಪರಿಸರವನ್ನು ಪುನಃ ಅನುಭವಿಸಲು ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಕತ್ತಲು ಮತ್ತು ಹತಾಶೆಯ ಈ ಕಾಲಘಟ್ಟದಲ್ಲಿ ದೇವೋತ್ತಮ ಪರಮಪುರುಷನಾದ ಶ್ರೀಕೃಷ್ಣನ ದರ್ಶನ, ಕೀರ್ತನೆಗಳ ಶ್ರವಣ, ಪ್ರಸಾದ ಸ್ವೀಕರಿಸುವ ಮೂಲಕ ನಿಮ್ಮ ಹೃನ್ಮನ ತೆರೆದು ಭಕ್ತಿಭಾವದ ಆಶೀರ್ವಾದವನ್ನು ಪಡೆಯಿರಿ. ಕೃಷ್ಣ ಪ್ರಜ್ಞೆ ಎಲ್ಲರಿಗೂ ಆಧ್ಯಾತ್ಮಿಕ ಸಂತೋಷ ಮತ್ತು ಜ್ಞಾನೋದಯವನ್ನು ನೀಡಲಿ ಎಂದಿದ್ದಾರೆ.