ದುಬೈ : ಕ್ರಿಕೆಟ್ ಪ್ರೇಮಿಗಳನ್ನು ಒಂದು ತಿಂಗಳ ಕಾಲ ಹುಚ್ಚೆದ್ದು ಕುಣಿಸಿ ಕ್ರಿಕೆಟ್ ಹಬ್ಬದ ರಸದೌತಣವನ್ನು ನೀಡಿದ್ದ 13 ನೇ ಆವೃತ್ತಿಯ ಇಂಡಿಯನ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಅಂತಿಮ ಘಟ್ಟ ತಲುಪಿದೆ. ಅಂತಿಮ ಹಣಾಹಣಿಯಲ್ಲಿ ಇಂದು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮೊದಲ ಬಾರಿಗೆ ಫೈನಲ್ಗೇರಿದ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡಲಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಐಪಿಎಲ್ ಟ್ರೋಫಿ ಗೆ ಮುತ್ತಿಕ್ಕುವ ತಂಡ ಯಾವುದು ಎಂದು ಕ್ರಿಕೆಟ್ ಪ್ರೇಮಿಗಳು ತುದಿಗಾಲಿಲನಲ್ಲಿ ಕಾಯುತ್ತಿದ್ದಾರೆ.
ಹಾಟ್ ಫೇವರಿಟ್ ತಂಡ ಎನಿಸಿಕೊಂಡಿರುವ ಮುಂಬೈ ತಂಡ ಶ್ರೇಯಸ್ ಪಡೆಯನ್ನು ಎರಡು ಬಾರಿ ಲೀಗ್ ಹಂತದಲ್ಲಿ ಮತ್ತು ಒಮ್ಮೆ ಪ್ಲೇ ಆಫ್ಸ್ನಲ್ಲಿ ಸೋಲಿಸಿ ಮುನ್ನಡೆ ಸಾಧಿಸಿದ್ದು, ಫೈನಲ್ನಲ್ಲಿ ಭಾರೀ ಆತ್ಮವಿಶ್ವಾಸದೊಂದಿಗೆ ಅಖಾಡಕ್ಕೆ ಇಳಿಯುತ್ತಿದೆ.ಆದರೆ, 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಡೆಲ್ಲಿ ತಂಡವನ್ನು ಕಡೆಗಣಿಸುವಂತಿಲ್ಲ.
ಡೆಲ್ಲಿ ತಂಡದಲ್ಲಿ ಶಿಖರ್ ಧವನ್ ಸದ್ಯ ಅತ್ಯುತ್ತಮ ಫಾರ್ಮ್ಗೆ ಮರಳಿರುವುದು ಒಂದುಕಡೆಯಾದರೆ ಇವರ ಜೊತೆ ಕಂಡ ಮಾರ್ಕಸ್ ಸ್ಟಾಯಿನಿಸ್ ಮೇಲೆ ಕೂಡ ಬಲುದೊಡ್ಡ ನಿರೀಕ್ಷೆಯಿದೆ. ನಾಯಕ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರೋನ್ ಹೆಟ್ಮೇರ್ , ಅಜಿಂಕ್ಯ ರಹಾನೆ ಯಾವುದೇ ಸಂದರ್ಭದಲ್ಲಿ ಸಿಡಿಯುವ ಸಾಮರ್ಥ್ಯ ಹೊಂದಿದ್ದಾರೆ.ಇನ್ನು ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ ಮಾರಕ ದಾಳಿ ನಡೆಸುತ್ತಿದ್ದಾರೆ. ಆರ್. ಅಶ್ವಿನ್ ಸ್ಪಿನ್ ಮೋಡಿ ಕೂಡ ಕೆಲವೊಂದು ಕಡೆ ವರ್ಕೌಟ್ ಆಗಿರುವುದು ಡೆಲ್ಲಿ ತಂಡ ಪ್ರಥಮ ಐಪಿಎಲ್ ಟ್ರೋಫಿ ಎತ್ತಿಹಿಡಿಯಲಿದ್ದಾರೆ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಬಾಯಿಂದ ಕೇಳಿ ಬರುತ್ತಿದೆ.
ಇತ್ತ ಬ್ಯಾಟಿಂಗ್ – ಬೌಲಿಂಗ್ಎರಡರಲ್ಲೂ ಪ್ರಚಂಡ ಫಾರ್ಮ್ನಲ್ಲಿರುವ ಮುಂಬೈ ಇಂಡಿಯನ್ಸ್ಗೆ ಅನುಭವಿ ಆಟಗಾರರೇ ಆಸ್ತಿ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್ ಆಡಿದರೆ ಆಲ್ರೌಂಡರ್ಗಳಾದ ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅಬ್ಬರಿಸಲು ತಯಾರಾಗಿದ್ದಾರೆ. ಅನುಭವಿ ನಾಯಕ ರೋಹಿತ್ ಶರ್ಮಾ ಕೂಡಾ ಅಬ್ಬರಿಸಲು ಅಣಿಯಾಗಿದ್ದು ಮುಂಬೈ ಇಂಡಿಯನ್ಸ್ ತಂಡ 5 ನೇ ಬಾರಿಗೆ ಐಪಿಎಲ್ ಟ್ರೋಪಿಗೆ ಮುತ್ತಿಕುತ್ತಾ ಎನ್ನುವುದನ್ನ ಕಾದು ನೋಡಬೇಕಿದೆ.