ಶಾರ್ಜಾ:ಐಪಿಎಲ್ ಟಿ-20 ಪಂದ್ಯದಲ್ಲಿ ನಿನ್ನೆ ನಡೆದ ಪಂಜಾಬ್ ವಿರುದ್ದದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಸೋಲು ಅನುಭವಿಸಿದೆ. ಕೊಹ್ಲಿ ನಾಯಕತ್ವದ ಬೆಂಗಳೂರು ಮಾಡಿಕೊಂಡ ಎಡವಟ್ಟಿನಿಂದಾಗಿಯೇ ಮ್ಯಾಚ್ ಕೈ ಚೆಲ್ಲುವಂತಾಗಿದ್ದು ವಿಪರ್ಯಾಸ .
ಅತೀ ಚಿಕ್ಕ ಸ್ಟೇಡಿಯಂ ಎನಿಸಿಕೊಂಡ ಶಾರ್ಜಾ ಮೈದಾನದಲ್ಲಿ ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆರಿಸಿಕೊಂಡಿತು. ಫಿಂಚ್ 20ರನ್ ಕೊಹ್ಲಿ 48ರನ್ ಮತ್ತು ಕ್ರಿಸ್ ಮೋರೀಸ್ ಅವರ ಅಜೇಯ 25ರನ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 171 ರನ್ಗಳ ಉತ್ತಮ ಮೊತ್ತವನ್ನೇನೋ ಪೇರಿಸಿತ್ತು.
ಆರ್ ಸಿಬಿ ಗುರಿಯನ್ನು ಬೆನ್ನತ್ತಿದ್ದ ಪಂಜಾಬ್ ಪಡೆ ನಿಗದಿತ 20 ಓವರ್ಗಳಲ್ಲಿ 177 ರನ್ ಗಳಿಸುವ ಮೂಲಕ ಜಯದ ನಗೆ ಬೀರಿತು. ಮಯಾಂಕ್ ಅಗರ್ವಾಲ್ 45ರನ್ ,ಕೆ.ಎಲ್ ರಾಹುಲ್ ಅಜೇಯ 61ರನ್ ಮತ್ತು ನಿನ್ನೆಯ ಪಂದ್ಯದಿಂದ ಲಭ್ಯವಾಗಿರುವ ವೆಸ್ಟ್ ಇಂಡೀಸ್ ದೈತ್ಯ ಹೊಡಿಬಡಿ ಆಟಗಾರ ಕ್ರಿಸ್ ಗೇಲ್ ಅವರ 53ರನ್ ಗಳ ನೆರವಿನಿಂದ ಕೇವಲ ಎರಡು ವಿಕೆಟ್ ನಷ್ಟಕ್ಕೆ 177ರನ್ ಗಳಿಸುವ ಮೂಲಕ 8ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನಗತ್ಯ ಪ್ರಯತ್ನಗಳನ್ನು ಮಾಡಿ ಕೈಸುಟ್ಟುಕೊಂಡಿತು .4 ನೇ ಹಂತದಲ್ಲಿ ಎಬಿಡಿ ಯವರನ್ನ ಕಣಕ್ಕಿಳಿಸದೇ ಇದಿದ್ದು, ವೇಗದ ಬೌಲರ್ ಗಳನ್ನು ಮಾತ್ರ ಬಳಸಿ ಪಂಜಾಬ್ ತಂಡವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದ್ದು ಕೂಡ ತಂಡಕ್ಕೆ ಮುಳುವಾಯಿತು .
ಇತ್ತ ಪಂಜಾಬ್ ವಿರುದ್ಧ ಸೋತರೂ ಅಂಕಪಟ್ಟಿಯಲ್ಲಿ RCB ಮೂರನೇ ಸ್ಥಾನದಲ್ಲೇ ಮುಂದುವರೆದಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್ ಹಂತದ ಕನಸನ್ನು ಜೀವಂತವಾಗಿರಿಸಿಕೊಂಡಿದೆ ಇನ್ನು ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ ಮತ್ತು ಮುಂಬೈ ಇಂಡಿಯನ್ಸ್ ಮೊದಲರೆಡು ಸ್ಥಾನದಲ್ಲಿ ವಿರಾಜಮಾನವಾಗಿವೆ.