ಐಪಿಎಲ್ ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ಬೇಡದ ಪ್ರಯೋಗಗಳ ಮೂಲಕ ಪಂಜಾಬ್ ವಿರುದ್ಧ ಮುಗ್ಗರಿಸಿದ್ದ ಆರ್ ಸಿಬಿ ಗೆ ಇಂದು ಗೆಲ್ಲಲೇ ಬೇಕಾದ ಒತ್ತಡ ತಂದೊಡ್ಡಿಕೊಂಡಿದೆ.
ಕೊಹ್ಲಿ ನಾಯಕತ್ವದ ಬೆಂಗಳೂರು ಪಡೆ ಈ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ ಅತ್ತ ರಾಜಸ್ಥಾನ್ ಆಡಿರುವ 8 ಪಂದ್ಯಗಳಲ್ಲಿ ಕೇವಲ 3ರಲ್ಲಿ ಜಯಗಳಿಸಿ 7ನೇ ಸ್ಥಾನದಲ್ಲಿದೆ.
ದುಬೈ ಇಂಟರ್ನಾಶನಲ್ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯಲ್ಲಿದೆ. ಕೊಹ್ಲಿ ನಾಯಕತ್ವದ ಬೆಂಗಳೂರು ಇಂದು ಯಾವ ಪ್ರಯೋಗಗಳನ್ನು ಮಾಡಲಿದೆ ಎಂಬುದೇ ಅಭಿಮಾನಿಗಳಿಗೆ ಯಕ್ಷಪ್ರಶ್ನೆಯಾಗಿದೆ.
ಇನ್ನು ಆರ್ ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಎರಡೂ ಬಲಿಷ್ಠವಾಗಿದೆ . ಆ್ಯರೋನ್ ಫಿಂಚ್ ಮಾತ್ರ ರನ್ ತಂದುಕೊಡುವಲ್ಲಿ ಸೋಲುತ್ತಿದ್ದರೆ ದೇವದತ್ ಪಡಿಕಲ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದು ಇವತ್ತು ಕೂಡಾ ಅವರ ಬ್ಯಾಟ್ ನಿಂದ ರನ್ ಮಳೆ ನೀರೀಕ್ಷಿಸಬಹುದಾಗಿದೆ. ಆದರೆ ಉತ್ತಮ ಫಾರ್ಮ್ ನಲ್ಲಿದ್ದರೂ ಹೊಡಿ ಬಡಿ ಆಟಗಾರ ಮಿ.360ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಗೆ ಸೂಕ್ತ ಬ್ಯಾಟಿಂಗ್ ಆರ್ಡರ್ ನೀಡುವಲ್ಲಿ ಆರ್ ಸಿಬಿ ಎಡವುತ್ತಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಹಿಂದಿನ ತಪ್ಪುಗಳನ್ನು ಸರಿಪಡಿಸಿದರೆ ವಿಜಯಲಕ್ಷ್ಮಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕೊರಳೊಡ್ಡುವುದು ಖಚಿತ