ನವದೆಹಲಿ : ಆಫ್ರಿಕಾದ ತೈಲ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 7 ಮಂದಿ ಭಾರತೀಯರನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶ, ಬಿಹಾರ್, ಗುಜರಾತ್, ಉತ್ತರ ಪ್ರದೇಶ ಮೂಲದ 7 ಭಾರತೀಯರನ್ನು ಕಳೆದ ತಿಂಗಳು ಅಪಹರಿಸಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯಲು ಆಫ್ರಿಕನ್ ದೇಶವಾದ ಲಿಬಿಯಾದ ಅಧಿಕಾರಿಗಳ ಜೊತೆ ಭಾರತ ನಿಕಟ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್ 14ರಂದು ಭಾರತಕ್ಕೆ ಮರಳಲು ತ್ರಿಪೋಲಿ ಏರ್ಪೋರ್ಟ್ಗೆ ತೆರಳುತ್ತಿದ್ದಾಗ ಲಿಬಿಯಾದ ಆಶ್ವೆರಿಫ್ ಎಂಬ ಸ್ಥಳದಿಂದ 7 ಭಾರತೀಯರನ್ನು ಅಪಹರಿಸಲಾಗಿದೆ. ಅಪಹರಣಕ್ಕೊಳಗಾದ ಭಾರತೀಯರು ಕೆಲಸ ಮಾಡುತ್ತಿದ್ದ ತೈಲ ಕಂಪನಿಯ ಅಧಿಕಾರಿಗಳು ಈಗಾಗಲೇ ಅಪಹರಣಕಾರರೊಂದಿಗೆ ಮಾತನಾಡಿದ್ದು, ಎಲ್ಲಾ 7 ಭಾರತೀಯರು ಸುರಕ್ಷಿತವಾಗಿರುವುದು ಖಚಿತವಾಗಿದೆ. ಅವರನ್ನು ರಕ್ಷಿಸುವ ಬಗ್ಗೆಯೂ ಅಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಭಾರತ ಕೂಡ ಈ ಬಗ್ಗೆ ಕಾರ್ಯೋನ್ಮುಖವಾಗಿದೆ ಎಂದು ಅನುರಾಗ್ ತಿಳಿಸಿದ್ದಾರೆ.