ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಪ್ರವಾಸಿ ಭಾರತ ತಂಡದ ವಿರುದ್ಧದ ಅಂತಿಮ ಮೂರನೇ ಟಿ-20 ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ 12 ರನ್ಗಳ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿತಾದರೂ ನಂತರದಲ್ಲಿ ಚೇತರಿಕೆ ಕಂಡಿತು. ನಾಯಕ ಆಯರೋನ್ ಫಿಂಚ್ ಶೂನ್ಯಕ್ಕೆ ನಿರ್ಗಮಿಸಿದರೆ, ಸ್ಮಿತ್ (24) ರನ್ ಗಳ ಕಾಣಿಕೆ ನೀಡಿದರು. ನಂತರ ಭಾರತೀಯ ಬೌಲರ್ಗಳ ಬೆವರಿಳಿಸಿದ ಮ್ಯಾಥ್ಯೂ ಹೇಡ್ 53 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿದರೆ ಮ್ಯಾಕ್ಸ್ವೆಲ್ ಕೇವಲ36 ಎಸೆತಗಳಲ್ಲಿ 54 ರನ್ ಬಾರಿಸಿದರು.
ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಿತ್ತರೆ, ಶಾರ್ದುಲ್ ಠಾಕೂರ್, ಟಿ. ನಟರಾಜನ್ 1 ವಿಕೆಟ್ ಪಡೆದರು.
ಕಠಿಣ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡಿತು.ಕೆ. ಎಲ್ ರಾಹುಲ್ ಶೂನ್ಯಕ್ಕೆ ಔಟ್ ಆದರು.ನಂತರ ಜೊತೆಯಾದ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ 74 ರನ್ಗಳ ಜೊತೆಯಾಟ ಆಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
28 ರನ್ ಗಳಿಸಿದ ಧವನ್ ಔಟ್ ಆದರೆ, ಸಂಜು ಸ್ಯಾಮ್ಸನ್ ಆಟ 10 ರನ್ಗೆ ಅಂತ್ಯವಾಯಿತು. ಶ್ರೇಯಸ್ ಅಯ್ಯರ್ ಬಂದ ಬೆನ್ನಲ್ಲೇ ಸೊನ್ನೆ ಸುತ್ತಿದರು. ಹಾರ್ದಿಕ್ ಪಾಂಡ್ಯ ಕೇವಲ 20ರನ್ ಸುತ್ತಿ ನಿರ್ಗಮಿಸಿದರು.ಕೊನೆ ಹಂತದಲ್ಲಿ ಕೊಹ್ಲಿ(85ರನ್) ಬಿರುಸಿನ ಆಟ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.