ನವದೆಹಲಿ: ವಿವಾದಾತ್ಮಕ ಮೂರು ಕೃಷಿ ಕಾಯ್ದೆಯ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ನಡೆದ ಮಾತುಕತೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರದ ಹಿರಿಯ ಸಚಿವರ ನಿಯೋಗ ಅನ್ನದಾತರೊಂದಿಗೆ ಸಂಧಾನ ನಡೆಸಲಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರಮುಖವಾಗಿ ರೈತಮುಖಂಡರ ಜತೆ ಚರ್ಚೆ ನಡೆಸುವ ಸಾಧ್ಯತೆಯಿದೆ.ಬುಧವಾರ ನಡೆದಿದ್ದ 35 ರೈತ ಮುಖಂಡ ರೊಂದಿಗೆ ವಿಜ್ಞಾನ ಭವನದಲ್ಲಿ ನಡೆದ ಮಾತುಕತೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರದ ಮಾತುಕತೆ ಮಹತ್ವ ಪಡೆದಿದೆ.
ಗಾಜಿಪುರದಲ್ಲಿ ಪ್ರತಿಭಟನೆಯು ಇನ್ನಷ್ಟು ತೀವ್ರವಾಗಿದ್ದರಿಂದ ದೆಹಲಿ-ಉತ್ತರಪ್ರದೇಶ ಗಡಿಯನ್ನು ಮುಚ್ಚಲಾಗಿದೆ. ಫಿರೋಜಾಬಾದ್, ಮೀರಠ್, ನೋಯ್ಡಾ ಹಾಗೂ ಇಟಾವಾಗಳಿಂದ ಹೆಚ್ಚಿನ ರೈತರು ಬಂದು ಪ್ರತಿಭಟನಕಾರರನ್ನು ಸೇರಿದ್ದರಿಂದ ದೆಹಲಿ- ನೋಯ್ಡಾ ಸಂಪರ್ಕಿಸುವ ಎಲ್ಲಾ ಗಡಿಗಳನ್ನೂ ಮುಚ್ಚಲಾಗಿದೆ. ಇದರಿಂದಾಗಿ ರಾಜಧಾನಿಯನ್ನು ಸಂಪರ್ಕಿಸುವ ಐದು ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ.
ಹೊಸ ಕೃಷಿ ಕಾನೂನುಗಳ ವಿಚಾರದಲ್ಲಿ ರೈತರು ಎತ್ತಿರುವ ಪ್ರಶ್ನೆಗಳು ಹಾಗೂ ವ್ಯಕ್ತಪಡಿಸಿರುವ ಕಳವಳಗಳ ಬಗ್ಗೆ ಸರ್ಕಾರವು ಹೇಗೆ ರಚನಾತ್ಮಕ ಪ್ರತಿಕ್ರಿಯೆ ನೀಡಬಹುದು ಎಂಬ ಬಗ್ಗೆ ಹಿರಿಯ ಸಚಿವರು ಇದೀಗಾಗಲೇ ಕೇಂದ್ರ ಗೃಹ ಸಚಿವಾರಾದ ಅಮಿತ್ ಶಾ ಜೊತೆ ಚರ್ಚಿಸಿದ್ದಾರೆ.ಇದರ ನಡುವೆ ನಮ್ಮ ಬೇಡಿಕೆಗಳು ಈಡೇರುವವರೆಗೆ ನಾವಿಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಕಾರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಮಾತುಕತೆ ಭಾರೀ ಮಹತ್ವ ಪಡೆದಿದೆ.