ತಿರುವನಂತಪುರಂ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಎದ್ದಿರುವ ಬುರೇವಿ ಚಂಡಮಾರುತ ಇಂದು ಬೆಳಗ್ಗೆ ಮನ್ನಾರ್ ಕೊಲ್ಲಿ ಮತ್ತು ಪಕ್ಕದ ಕೊಮೊರಿನ್ ಪ್ರದೇಶದಲ್ಲಿ ಆರ್ಭಟಿಸಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕೇರಳಕ್ಕೆ ಮತ್ತೊಂದು ಜಲಕಂಟಕದ ಭೀತಿ ಎದುರಾಗಿದೆ.
12 ಕಿ.ಮೀ ವೇಗದಲ್ಲಿ ಶ್ರೀಲಂಕಾದಿಂದ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಂಡಮಾರುತ ಸಾಗುತ್ತಿದ್ದು ತಮಿಳುನಾಡಿನ ಕನ್ಯಾಕುಮಾರಿ, ತಿರುನೆಲ್ವೆಲಿ, ತೂತುಕುಡಿ ಮತ್ತು ತೆಂಕಾಸಿ ಜಿಲ್ಲೆಗಳಲ್ಲಿ ಹಾಗೂ ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೇರಳ ಮತ್ತು ತಮಿಳುನಾಡಿನ ಹಲವೆಡೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.ಕರ್ನಾಟಕದ ಮೇಲೂ ಬುರೇವಿ ಚಂಡಮಾರುತ ಪರಿಣಾಮ ಬೀರಿದ್ದು ರಾಜ್ಯ ರಾಜಧಾನಿಯಲ್ಲಿ ಬೆಳಿಗ್ಗೆಯಿಂದಲೇ ಮಳೆಯಾಗುತ್ತಿದೆ.
ಇನ್ನು ಪರಿಸ್ಥಿತಿ ಕುರಿತಂತೆ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣ ಸಮಿತಿ (ಎನ್ಸಿಎಂಸಿ) ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಸಮಿತಿಯು, ತಮಿಳುನಾಡು, ಕೇರಳ, ಲಕ್ಷದ್ವೀಪಗಳಲ್ಲಿ ಮೀನುಗಾರರಿಗೆ ನೀಡಲಾದ ಸಲಹೆ ಹಾಗೂ ರಕ್ಷಣ ಪಡೆಗಳ ನಿಯೋಜನೆ ಕುರಿತು ಪರಿಶೀಲನೆ ನಡೆಸಿದೆ.
ಬುರೇವಿ ಚಂಡಮಾರುತ ಕುರಿತು ಪರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗಾಗಲೇ ಎನ್ಡಿಆರ್ಎಫ್ನ ಎಂಟು ತಂಡಗಳು ಮತ್ತು ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಯನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.