ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣಾ ಕಾವು ತೀವ್ರಗೊಂಡಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.ರಾಜಕೀಯ ಪಕ್ಷಗಳ ಚಿಹ್ನೆ ಇಲ್ಲದಿದ್ದರೂ ಬಹುತೇಕ ಕಡೆಗಳಲ್ಲಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಸ್ಪರ್ಧೆಗಿಳಿದಿರುವುದರಿಂದ ಚುನಾವಣಾ ಕಣ ರಂಗೇರ ತೊಡಗಿದೆ.
ಇದೇ 27ರ ಭಾನುವಾರ ಮತದಾನ ನಡೆಯಲಿದ್ದು, ಮತದಾನ ಅಂತ್ಯಕ್ಕೂ 48 ಗಂಟೆಗಳ ಮುನ್ನ ಅಂದರೆ ಇಂದು ಸಂಜೆ ಪ್ರಚಾರ ಕೊನೆಗೊಂಡಿದೆ.ನಾಳೆ ಒಂದು ದಿನ ಮಾತ್ರ ಬಾಕಿ ಉಳಿದಿರುವುದರಿಂದ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿ ಮತದಾರರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.
ರಾಜ್ಯದ 109 ತಾಲ್ಲೂಕುಗಳ 2709 ಗ್ರಾಮಪಂಚಾಯತ್ ಗಳಿಗೆ ಮತದಾನ ನಡೆಯಲಿದೆ. ಒಟ್ಟು 43,291 ಸ್ಥಾನಗಳ ಪೈಕಿ 39,378 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಚುನಾವಣಾ ಕಣದಲ್ಲಿ 1,05,431 ಅಭ್ಯರ್ಥಿಗಳಿದ್ದಾರೆ. ಇನ್ನು 3697 ಅಭ್ಯರ್ಥಿಗಳು ಇದಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈಗಾಗಲೇ ಮೊದಲ ಹಂತದ 117 ತಾಲ್ಲೂಕುಗಳ 3019 ಗ್ರಾಮಪಂಚಾಯ್ತಿಗಳ ಚುನಾವಣೆಗೆ ಮತದಾನ ನಡೆದಿದೆ. ಎರಡೂ ಹಂತಗಳ ಮತ ಎಣಿಕೆ ಡಿ.30ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಅಂದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.