ನವದೆಹಲಿ: ವಿವಾದಿತ ಕೃಷಿ ಮಸೂದೆ ವಿರೋಧಿಸಿ ದೇಶದ ರೈತರು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು.’ದೆಹಲಿ ಚಲೋ’ ಹೆಸರಿನಲ್ಲಿ ಜಮಾವಣೆಗೊಂಡಿದ್ದ ಲಕ್ಷಾಂತರ ಪ್ರತಿಭಟನಾ ನಿರತ ರೈತರಿಗೆ ತಡೆ ನೀಡಲಾಗಿತ್ತು. ಆದ್ರೆ ಇದೀಗ ರೈತರ ಆಕ್ರೋಶಕ್ಕೆ ಮಣಿದಿರುವ ಸರ್ಕಾರ ದೆಹಲಿ ಪ್ರವೇಶಕ್ಕೆ ರೈತರಿಗೆ ಅನುಮತಿ ನೀಡಿದೆ.
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ ರೈತಸಂಘಟನೆಗಳು ಶುಕ್ರವಾರ ದೆಹಲಿಯಲ್ಲಿ ಬುರಾರಿ ಮೈದಾನದಲ್ಲಿ ಹೋರಾಟ ನಡೆಸಲು ದೆಹಲಿಯತ್ತ ಹೊರಟಿದ್ದರು. ಆದರೆ, ಹರಿಯಾಣ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಹೋರಾಟಕ್ಕೆ ತಡೆ ಹಾಕುವ ಪ್ರಯತ್ನ ನಡೆಸಿತು. ಪಂಜಾಬ್ -ಹರಿಯಾಣ ಗಡಿಯಲ್ಲಿ ದೆಹಲಿಗೆ ಹೊರಟಿದ್ದ ರೈತರನ್ನು ಚದುರಿಸಲು ಜಲಫಿರಂಗಿ ಪ್ರಯೋಗಿಸಲಾಯಿತು. ದೆಹಲಿಗೆ ಪ್ರವೇಶಿಸಲು ರೈತರಿಗೆ ಅವಕಾಶ ಸಿಗದಂತಾಗಿತ್ತು.
ಅಲ್ಲದೇ ಅನ್ನದಾತರನ್ನು ಕಟ್ಟಿಹಾಕಲು ಬಿಎಸ್ ಎಫ್ ಯೋಧರನ್ನು ಅಖಾಡಕ್ಕಿಳಿಸಲು ಸರ್ಕಾರ ಸಿದ್ದತೆ ನಡೆಸಿತ್ತು. ಸರ್ಕಾರದ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಇದರ ಬೆನ್ನೆಲ್ಲೇ ಎಚ್ಚೆತ್ತ ದೆಹಲಿ ಪೊಲೀಸರು ರೈತರಿಗೆ ದೆಹಲಿ ಪ್ರವೇಶಿಸಿಲು ಅವಕಾಶ ಮಾಡಿಕೊಟ್ಟಿದ್ದಾರೆ.ಬುರಾರಿ ಪ್ರದೇಶದ ನಿರಂಕಾರಿ ಸಮಗಮ್ ಮೈದಾನದಲ್ಲಿ ಪ್ರತಿಭಟನೆ ಮಾಡಲು ಅನುಮತಿ ನೀಡಲಾಗಿದೆ.
ಉತ್ತರಪ್ರದೇಶ, ಹರ್ಯಾಣ, ಉತ್ತರಾಖಂಡ್, ರಾಜಸ್ಥಾನ್, ಕೇರಳ ಮತ್ತು ಪಂಜಾಬ್ ಸೇರಿದಂತೆ ಆರು ರಾಜ್ಯಗಳ ರೈತರು ಟ್ರ್ಯಾಕ್ಟರ್ ಮೂಲಕ ಹಲವು ದಿನಗಳಿಗೆ ಸಾಕಾಗುವಷ್ಟು ಆಹಾರ, ನೀರಿನ ಜತೆಗೆ ದೆಹಲಿ ಚಲೋ ಆರಂಭಿಸಿದ್ದರು. ಇದೀಗ ನಿರಾಂಕಾರಿ ಮೈದಾನದಲ್ಲಿ ರೈತರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.