ಮಂಗಳೂರು: ಕೊರೋನಾ ಕಾರಣದಿಂದಾಗಿ ಅದ್ಧೂರಿಯಾಗಿ ನಡೆಯುತ್ತಿದ್ದ ದೇವರ ಕಾರ್ಯಗಳೆಲ್ಲಾ ಸರಳವಾಗಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ದಸರಾ ಹಬ್ಬವನ್ನು ಲಕ್ಷಾಂತರ ಮಂದಿ ಸೇರಿ ವಿಜೃಂಭಣೆಯಿಂದ ಮಾಡುತ್ತಿದ್ದರು. ಆದ್ರೆ ಈ ಬಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿಸಿದ್ದರು. ಅದರ ಬೆನ್ನಲ್ಲೇ ಇದೀಗ ಕುಕ್ಕೆ ಸುಬ್ರಮಣ್ಯ ಷಷ್ಠಿಯನ್ನು ಸರಳವಾಗಿ ಹಾಗೂ ಸಂಪ್ರದಾಯವಾಗಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.
ಕೋವಿಡ್ -19 ಮಾರ್ಗಸೂಚಿಯಲ್ಲಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನಡೆಯುವ ಚಂಪಾಷಷ್ಠಿ ಮಹೋತ್ಸವವನ್ನು ಭಕ್ತರ ಸಹಭಾಗಿತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ರಾಜ್ಯ ಧಾರ್ಮಿಕದತ್ತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳ ಮತ್ತು ಅಭಿವೃದ್ಧಿ ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸಿದರು. ಡಿಸೆಂಬರ್ 12 ರಿಂದ 26 ರ ತನಕ ಚಂಪಾಷಷ್ಠಿ ಮಹೋತ್ಸವ ನಡೆಯಲಿದ್ದು, ಜಾತ್ರೋತ್ಸವಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಚಂಪಾಷಷ್ಠಿ ಮಹೋತ್ಸವದಲ್ಲಿ ವರ್ಷಂಪ್ರತಿ ನಡೆಯುವ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಕೋವಿಡ್ -19 ಮಾರ್ಗಸೂಚಿಯ ನಡುವೆಯೇ ನಡೆಸಲು ತೀರ್ಮಾನಿಸಿರುವ ಸರಕಾರ ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಊಟ, ವಸತಿ, ಅನ್ನಸಂತರ್ಪಣೆ ಸೇವೆ, ತುಲಾಭಾರ ಸೇವೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಜಾತ್ರೋತ್ಸವ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಕ್ಷೇತ್ರದ ವಿಶೇಷ ಸೇವೆಯಾದ ಎಡೆಮಡೆಸ್ನಾನ ಸೇವೆಯನ್ನು ನೆರವೇರಿಸುವ ಕುರಿತು ಆರೋಗ್ಯ ಇಲಾಖೆಯ ಸಲಹೆಯನ್ನೂ ಕೇಳಲು ತೀರ್ಮಾನಿಸಲಾಗಿದೆ. ಕುಮಾರಧಾರಾ ಸ್ನಾನಘಟ್ಟದಲ್ಲಿ ಭಕ್ತರಿಗೆ ತೀರ್ಥಸ್ನಾನ ನೆರವೇರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸ್ನಾನಘಟ್ಟದ ಬಳಿ ನದಿಯ ಹೂಳು ತೆಗೆಯುವ ಕಾರ್ಯವನ್ನೂ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಸ್ನಾನಘಟ್ಟದಿಂದ ಕ್ಷೇತ್ರದವರೆಗಿನ 1.5 ಕಿ.ಮೀ ರಸ್ತೆಗೆ ಇಂಟರ್ ಲಾಕ್ ಅಳವಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.