ಬೆಳಗಾವಿ : ಗುಗಲ್ ಮ್ಯಾಪ್ ಎಲ್ಲರಿಗೂ ತುಂಬಾ ಉಪಯೋಗಕ್ಕೆ ಬರುವಂತದ್ದು. ಎಲ್ಲಿಯಾದರೂ ಅಡ್ರೆಸ್ ಮಿಸ್ ಆದ್ರೆ ನಾವೇಲ್ಲಾ ಗೂಗಲ್ ಮ್ಯಾಪ್ ಹಾಕೊಂಡು ಹುಡಕುತ್ತೇವೆ. ಅದ್ರೆ ಇಲ್ಲೊಂದು ಖತರ್ನಾಕ್ ಗ್ಯಾಂಗ್ ಇದೇ ಗೂಗಲ್ ಮ್ಯಾಪ್ ಬಳಸಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಇಲ್ಲಿನ ನಗರ ಪ್ರದೇಶದ ಹೊರ ವಲಯದ ಮನೆಗಳನ್ನ ಈ ಗ್ಯಾಂಗ್ ಸ್ಯಾಟಲೈಟ್ ಮೂಲಕ ಪತ್ತೆ ಮಾಡುತ್ತಿತ್ತು. ಅಕ್ಕಪಕ್ಕದಲ್ಲಿ ಎಷ್ಟು ಮನೆಗಳಿವೆ, ಮನೆ ಪಕ್ಕದ ರಸ್ತೆ ಆ ರಸ್ತೆಯಿಂದ ಮುಖ್ಯ ರಸ್ತೆ ಹಾಗೂ ಯಾರಾದರೂ ಬಂದರೂ ಸಹ ಅಡಗಿಕೊಳ್ಳಲು ಬೇಕಾದ ಜಾಗ ಹಾಗೂ ಎಸ್ಕೇಪ್ ಆಗಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನ ಗೂಗಲ್ ಮ್ಯಾಪ್ ಮೂಲಕವೇ ಅಧ್ಯಯನ ಮಾಡುತ್ತಿದ್ದರು. ಬಳಿಕ ಇಬ್ಬರು ಕಳ್ಳರು ಸೇರಿ ಮನೆಯನ್ನ ಮ್ಯಾಪ್ ಮೂಲಕ ಹುಡುಕಿಕೊಂಡು ಸ್ಥಳ ಪರಿಶೀಲನೆ ಮಾಡಿ ಮನೆಗೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದರು.
ಕೊಲ್ಲಾಪುರ ಜಿಲ್ಲೆಯ ಇಸ್ತುರಲ್ ಗ್ರಾಮದ ಪ್ರಶಾಂತ ಕಾಶಿನಾಥ ಕರೋಶಿ (35) ಹಾಗೂ ಧಾಮಣಿ ಗ್ರಾಮದ ಅವಿನಾಶ್ ಶಿವಾಜಿ ಅಡಾವಕರ್ (28) ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 28.08 ಲಕ್ಷ ಮೌಲ್ಯದ ಅರ್ಧ ಕೆಜಿಯ ಚಿನ್ನದ ಆಭರಣಗಳು ಹಾಗೂ 11.50 ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು 40 ಲಕ್ಷ ಮೌಲ್ಯದ ಸ್ವತ್ತುಗಳನ್ನ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರದ ಕ್ಯಾಂಪ್ ಠಾಣೆಯ ಹೊರ ವಲಯದಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಇದನ್ನ ತನಿಖೆ ನಡೆಸಲು ಮುಂದಾಗಿದ್ದ ಕ್ಯಾಂಪ್ ಠಾಣೆಯ ಪೊಲೀಸ್ ನಿರೀಕ್ಷಕ ಡಿ. ಸಂತೋಷ ಕುಮಾರ್ ತಮ್ಮದೆ ಒಂದು ತಂಡ ರಚನೆ ಮಾಡಿ ತನಿಖೆ ಆರಂಭಿಸಿದರು. ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಕಳ್ಳತನ ಮಾಡಲು ಪಕ್ಕದ ರಾಜ್ಯದ ಕಳ್ಳರೇ ಬಂದಿರುವ ಶಂಕೆ ಮೇರೆಗೆ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ ಕ್ರೈಮ್ ತನಿಖಾ ತಂಡದಿಂದ ಮಾಹಿತಿ ಪಡೆದ ಪೊಲೀಸರ ತಂಡ ಇಲ್ಲಿ ನಡೆದ ಅಪರಾಧದ ಮಾಹಿತಿ ನೀಡಿ ಅಲ್ಲಿದ್ದ ಕೆಲವು ಶಂಕಿತ ಆರೋಪಿಗಳ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.