ಚನ್ನಪಟ್ಟಣ: ಚನ್ನಪಟ್ಟಣಕ್ಕೆ ನಾನೇ ಮಂತ್ರಿ , ನಾನೇ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಗುಟುರು ಹಾಕಿದ್ದಾರೆ. ಹೆಸರು ಹೇಳದೆ ಪರೋಕ್ಷವಾಗಿ ಸಿ.ಪಿ ಯೋಗೇಶ್ವರ್ ಅವರಿಗೆ ಹೆಚ್ಡಿಕೆ ಟಾಂಗ್ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಬಿಜೆಪಿಯಲ್ಲಿ ಮಂತ್ರಿ ಮಾಡಬೇಡಿ ಎಂದು ನಾನು ಹೇಳಿದ್ದೀನಂತೆ. ಯಾರನ್ನೋ ಮಂತ್ರಿ ಮಾಡಿದರೆ ನಾನು ಹೆದರಿಕೊಳ್ಳುವ ವ್ಯಕ್ತಿಯಲ್ಲ ಎಂದು ಹೆಚ್ಡಿಕೆ, ಸಿ.ಪಿ ಯೋಗೇಶ್ವರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.ಅವರು 20 ಕೆರೆ ತುಂಬಿಸಿರೋದಕ್ಕೆ ಭಗೀರಥ ಆಗಿಬಿಟ್ಟರು, ನಾನು 128 ಕೆರೆ ತುಂಬಿಸಿದ್ದೇನೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿರುವ ವ್ಯಕ್ತಿ ಹಾಗಂತ ನಾನೇನು ಬೋರ್ಡ್ ಹಾಕಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಬಡವರಿಗೆ ಅನ್ಯಾಯ ಹಾಗೂ ಅಕ್ರಮ ಚಟುವಟಿಕೆ ನಡೆಯಲು ಅವಕಾಶ ಮಾಡಿಕೊಡುವುದಿಲ್ಲ. ಮುಖ್ಯಮಂತ್ರಿಗಳ ನಮ್ಮ ಜಿಲ್ಲೆಯವರನ್ನೇ 4 ಜನ ಮಂತ್ರಿಗಳನ್ನಾಗಿ ಮಾಡಲಿ. ಇವರನ್ನು ಮಂತ್ರಿ ಮಾಡಬೇಡಿ ಎಂದು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಮಾಜಿ ಹೇಳಿದರು.
ಕೆಲವರು ನನ್ನನ್ನ ಬೈಯ್ಯಬಹುದು. ಆದರೆ, ನಾನು ಅನ್ಯಾಯಕ್ಕೆ ಬೆಂಬಲ ಕೊಡಲ್ಲ. ನ್ಯಾಯಯುತವಾಗಿ ಯಾರೇ ಬಂದರೂ ನಾನು ಬೆಂಬಲ ಕೊಡುತ್ತೇನೆ. ಆದರೆ, ಅನ್ಯಾಯದ ಮಾರ್ಗದಲ್ಲಿ ಬಂದರೆ ಯಾವುದೇ ಕಾರಣಕ್ಕೂ ನಾನು ಅವರ ಪರವಾಗಿ ನಿಲ್ಲಲ್ಲ. ನಾವು ಹೋಗುವಾಗ 6 ಅಡಿ, 3 ಅಡಿ ಅಷ್ಟೇ, ಆದರೆ ನಾವು ಗಳಿಸುವ ಪ್ರೀತಿಯಷ್ಟೇ ಮುಖ್ಯ. ಹಾಗಾಗಿ ಚನ್ನಪಟ್ಟಣದಲ್ಲಿ ಬಡವರ ಭೂಮಿ ಲಪಟಾಯಿಸಲು ನಾನು ಬಿಡಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.