ಬೆಂಗಳೂರು: ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ಜನರಿಗೆ ಕೊರೊನಾ ಎಂಬ ವೈರಸ್ ಇದೆ ಎಂಬುದೆ ಮರೆತೋಗಿದೆ ಎನಿಸುತ್ತಿದೆ. ಕೊರೊನಾ ವೈರಸ್ ಮಾರಾಣಾಂತಿಕ ವೈರಸ್ ಅಂತ ಹೇಳಲಾಗಿದೆ. ಆದ್ರೂ ಕೂಡ ಜನರಿಗೆ ಅದರ ಅರಿವಿಲ್ಲ. ಎಲ್ಲಾ ದೇಶಗಳು ಔಷದ ಕಂಡುಹಿಡಿಯುವಲ್ಲಿ ನಿರತರಾಗಿದ್ದರು, ಇನ್ನು ಯಾವ ದೇಶದ ಪ್ರಯೋಗವೂ ಯಶಸ್ವಿಯಾಗಿಲ್ಲ. ಹೀಗಿರುವಾಗ ಜನ ಎಷ್ಟು ಎಚ್ಚರಿಕೆಯಿಂದ ಇರಬೇಕು.
ವೈರಸ್ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರವೇ ಅಧಿಕೃತ ಆದೇಶ ಹೊರಡಿಸಿದೆ. ಈ ಬಾರಿಯ ದೀಪಾವಳಿಯನ್ನ ಸರಳವಾಗಿ ದೀಪ ಬೆಳಗಿಸುವ ಮೂಲಕ ಆಚರಿಸಿ ಎಂದು ಆದೇಶ ಹೊರಡಿಸಿದೆ. ಸರಳವಾಗಿ ಆಚರಿಸೋದಕ್ಕೂ ಜನ ಮಾರುಕಟ್ಟೆಗಳಲ್ಲಿ ದೊಂಬಿಯಂತೆ ನುಗ್ಗುತ್ತಿದ್ದಾರೆ.
ಮಾಸ್ಕ್ ಧರಿಸುವುದರಿಂದಲೂ ಕೊರೊನಾ ತಡೆಯಬಹುದು. ಆದಷ್ಟು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿ ಅಂತ ಸರ್ಕಾರ ಪದೇ ಪದೇ ಹೇಳುತ್ತಿದೆ. ಆದ್ರೆ ಜನ ಮಾತ್ರ ಕಿವುಡರಾಗಿದ್ದಾರೆ. ಮಾಸ್ಕ್ ಧರಿಸಿಯೂ ಧರಿಸದಂತೆ ಓಡಾಡುತ್ತಿದ್ದಾರೆ. ಹಾಗಾದ್ರೆ ಸರ್ಕಾರ ಕೊರೊನಾ ತಡೆಯಲ್ಲಿ ಹೇಗೆ ಕ್ರಮ ಕೈಗೊಳ್ಳಬೇಕು ಅನ್ನೋದು ಗೊತ್ತಾಗ್ತಿಲ್ಲ.
ಬೇಕಾಬಿಟ್ಟಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರವಿಲ್ಲದೆ ಜನರು ಪರಸ್ಪರ ನೂಕುನುಗ್ಗಲಲ್ಲಿ ಓಡಾಡುವುದು ಮತ್ತು ಅಂಗಡಿಗಳ ಒಳಗೆ ಗುಂಪು ಗುಂಪಾಗಿ ಸೇರುತ್ತಿರುವುದು ಕೊರೊನಾ ಮತ್ತಷ್ಟು ಹಬ್ಬಲು ಕಾರಣವಾಗಬಹುದು.
ಅಂಗಡಿಗಳಲ್ಲಿ, ರಸ್ತೆಗಳಲ್ಲಿ ಜನ ಮಾಸ್ಕ್ಗಳನ್ನು ಧರಿಸುವುದು ಬೇಕಾಬಿಟ್ಟಿಯಾಗಿದೆ. ಮಾಸ್ಕ್ ಹಾಕಿದ್ದೇವೆ ಎಂದು ತೋರಿಸಿಕೊಳ್ಳಲು ಮಾತ್ರ ಬಳಕೆಯಾಗುತ್ತಿದೆ. ಇನ್ನೂ ದೈಹಿಕ ಅಂತರವಂತೂ ಮರೆತ ಮಾತಾಗಿದೆ. ಜನ ಶಾಪಿಂಗ್ ಹೆಸರಲ್ಲಿ ಕೊರೊನಾಗೆ ಆಹ್ವಾನ ನೀಡುತ್ತಿದ್ದಾರೆ. ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರಿಗಳು ಮಾಸ್ಕ್ ಧರಿಸುವಂತೆ ಹೇಳಿದರೂ ಗ್ರಾಹಕರು ಅಸಡ್ಡೆ ಮಾಡುತ್ತಾರೆ ಎಂದು ಕೆಲ ವ್ಯಾಪಾರಿಗಳು ಆರೋಪಿಸಿದ್ದಾರೆ.
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಜನ ಸಾಲುಗಟ್ಟಿ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊರೊನಾ ಇರುವುದಾದರೂ ಎಲ್ಲಿ ಎಂಬ ವ್ಯಂಗ್ಯದ ಪ್ರಶ್ನೆಗಳಿಟ್ಟು ನೆಟ್ಟಿಗರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ದೀಪಾವಳಿ ನಮ್ಮೆಲ್ಲರಿಗೂ ಹಬ್ಬವಾಗಬೇಕೇ ಹೊರತು ಕೊರೊನಾಗೆ ಹಬ್ಬವಾಗಬಾರದು. ಹಬ್ಬದ ಸಡಗರ ಸಂಭ್ರಮದ ನಡುವೆ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಮಾಸ್ಕ್ ಧರಿಸಿವುದು, ಪದೇ ಪದೇ ಕೈತೊಳೆಯುವುದು, ಭೌತಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ. ನಮ್ಮ ನಿರ್ಲಕ್ಷವೇ ಕೊರೊನಾಗೆ ಆಹ್ವಾನ.#ಹಬ್ಬದಲ್ಲಿ_ಹಬ್ಬದಿರಲಿ_ಕೊರೊನಾ pic.twitter.com/wqLYS10Z8f
— Dr Sudhakar K (@mla_sudhakar) November 11, 2020